ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟನೆ ನರವೇರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ & ವೈದ್ಯಕೀಯ ಸಚಿವ ಸುಧಾಕರ್, ಶಾಸಕ ರಿಜ್ವಾನ್ ಹರ್ಷದ್ ಉಪಸ್ಥಿತರಿದ್ದರು.
ಬಳಿಕ ಮಾತಾನಾಡಿದ ಸಿಎಂ ಯಡಿಯೂರಪ್ಪ, ವಾಜಪೇಯಿ ನೂತನ ಕಟ್ಟಡ ಉದ್ಘಾಟನೆ ಸಂತೋಷ ತಂದಿದೆ. ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ವಾಜಪೇಯಿ ಹೆಸರಿನಲ್ಲಿ ಮರು ನಾಮಕರಣ ಮಾಡಲಾಗಿದೆ. ಮೊನ್ನೆಯಷ್ಟೇ ಅವರ ಹುಟ್ಟುಹಬ್ಬ ಆಚರಿಸಲಾಯ್ತು. ಈ ಅಪೂರ್ವ ಸಂದರ್ಭದಲ್ಲಿ ಈ ಕಟ್ಟಡ ಉದ್ಘಾಟನೆ ಮಾಡಲಾಗುತ್ತಿದೆ. 104 ಬೆಡ್‌ನೊಂದಿಗೆ ಆರಂಭವಾದ ಆಸ್ಪತ್ರೆ ಸಾವಿರಾರು ಬೆಡ್ಗಳ ಆಸ್ಪತ್ರೆಯಾಗಿ ಮಾರ್ಪಾಡಾಗಿದೆ ಎಂದರು.
ಬೌರಿಂಗ್ ಮತ್ತು ಲೇಡಿ ಕರ್ಜನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲಿ. ರಾಜ್ಯದಲ್ಲಿ ಕೋವಿಡ್ ಬಂದ ಸಂದರ್ಭದಲ್ಲಿ ವೈದ್ಯರು ಉತ್ತಮ ಸೇವೆ ಸಲ್ಲಿಸಿದ್ದಾರೆ. ನಮ್ಮ ಸರ್ಕಾರದ ಉದ್ದೇಶ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಕೊಡುಗೆ ನೀಡುವುದು. ಉತ್ತಮ ಬದಲಾವಣೆ ತರೋದು ಪ್ರಧಾನಿ ಮೋದಿಯವರ ಆಶಯವಾಗಿದೆ ಎಂದರು.
ಸುಂದರ ಕಟ್ಟಡ ಆರಂಭಿಸಲಾಗಿದ್ದು, ಜೀವದ ಆಸೆ ಇಟ್ಟುಕೊಂಡು ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಆಗಷ್ಟೇ ಈ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಸಾರ್ಥಕವಾಗಲಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ನೀಡಿದರೆ ವೈದ್ಯರ ಸೇವೆ ಸಾರ್ಥಕವಾಗಲಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಸುಧಾಕರ್, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಅದ್ಭುತವಾದ ಕಟ್ಟಡವಾಗಿದ್ದು, ಇದು ಈ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯವಿತ್ತು. ಈ ವರ್ಷ ನಾಲ್ಕು ವೈದ್ಯಕೀಯ ಕಾಲೇಜು ಆರಂಭವಾಗಿವೆ. 2016ರಲ್ಲಿ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದರು. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈಗ ವೇಗ ನೀಡಲಾಗಿದೆ. 150 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗಿದೆ ಎಂದರು.
ವಾಜಪೇಯಿ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. 1985, 2002 ಹಾಗೂ 2017ರಲ್ಲಿ ಮೂರು ಆರೋಗ್ಯ ನೀತಿ ತರಲಾಗಿದೆ. ಸಿಎಂ ಸೂಚನೆ ಮೇರೆಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಎರಡೂ ಕ್ಷೇತ್ರಗಳಿಗೆ ಇನ್ನೆರಡು ತಿಂಗಳಲ್ಲಿ ಆರೋಗ್ಯ ನೀತಿ ತರಲಾಗುವುದು. ಮೋದಿಯವರು ಪ್ರಧಾನಿ ಆದ ಬಳಿಕ 150 ವೈದ್ಯಕೀಯ ಕಾಲೇಜು ಮಾಡಿಕೊಟ್ಟಿದ್ದಾರೆ. 22 ಏಮ್ಸ್ ಹುಟ್ಟುಹಾಕಿದ್ದಾರೆ. ಪ್ರತೀ ರಾಜ್ಯದಲ್ಲೂ ಇಂದು ಏಮ್ಸ್ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ ಎಂದರು.