ಬೆಂಗಳೂರು: ಬ್ರಿಟನ್ನಿಂದ ಬಂದವರು ಕಣ್ತಪ್ಪಿಸಿಕೊಂಡು ಓಡಾಡುವುದನ್ನು ಬಿಟ್ಟು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶ ಹಾಗೂ ಕರ್ನಾಟಕದಲ್ಲಿ ರೂಪಾಂತರ ವೈರಾಣು ಕುರಿತು ಕೇಂದ್ರ ಆರೋಗ್ಯ ಇಲಾಖೆ ಎಲ್ಲವನ್ನೂ ಗಮನಿಸುತ್ತಿದೆ. ರಾಜ್ಯದಿಂದ ನಾವು ಕಟ್ಟೆಚ್ಚರ ವಹಿಸಬೇಕು ಮತ್ತು ಬ್ರಿಟನ್ ಸೇರಿದಂತೆ ಹೊರದೇಶಗಳಿಂದ ಬಂದವರನ್ನು ಸೂಕ್ತ ರೀತಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದರು.
ಈಗಾಗಲೇ ಬ್ರಿಟನ್ನಿಂದ ಬಂದಿರುವವರು ಕಣ್ತಪ್ಪಿಸಿಕೊಂಡು ಓಡಾಡುವುದನ್ನು ಬಿಟ್ಟು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಸಹಕಾರ ನೀಡಬೇಕು. ಬಹಳ ದೊಡ್ಡ ಪ್ರಮಾಣದಲ್ಲಿ ರೂಪಾಂತರ ವೈರಾಣು ಹರಡುವುದರಿಂದ ಕಟ್ಟೆಚ್ಚರ ವಹಿಸಬೇಕು, ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದರು.
ಹೊರಗಡೆಯಿಂದ ಬಂದವರು ಒಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿಕೊಳ್ಳಬೇಕು, ಇಲ್ಲದೇ ಇದ್ದಲ್ಲಿ ಬೇರೆಯವರಿಗೆ ತೊಂದರೆಯಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಮುಖ್ಯಮಂತ್ರಿಯಾಗಿ ಮನವಿ ಮಾಡುತ್ತಿದ್ದೇನೆ ಎಂದು ಪದೇ ಪದೇ ಹೇಳಿದರು.
ಓದಿ : ಜನವರಿಯಿಂದ ಶಾಲೆಗಳು ಪುನಾರಂಭ : ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜುಗಳಿಗೆ ರೌಂಡ್ಸ್
ರೂಪಾಂತರ ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಸಧ್ಯ ಈಗಾಗಲೇ ಇರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ದೆಹಲಿಯಿಂದ ಯಾವ ಸೂಚನೆ ಬರುತ್ತದೆಯೋ ಕಾದುನೋಡಬೇಕು ಈಗಿರುವ ಪ್ರಕಾರ ಎಚ್ಚರವಹಿಸಿದರೆ ಸಾಕಾಗಲಿದೆ ಎಂದರು.
ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಸಾಧಿಸಿದೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಕೂಡ ಇಂದು ಬರುತ್ತದೆ ಹಾಗಾಗಿ ಈ ಎಲ್ಲದರ ಬಗ್ಗೆ ನಾಳೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.