ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಸಾರಿಗೆ ಪ್ರಕಾರಗಳನ್ನು ಒಗ್ಗೂಡಿಸುವ ಬಹು ಮಾದರಿ ಸಂಚಾರ ವ್ಯವಸ್ಥೆಯನ್ನು ನಿರಂತರವಾಗಿ ಪ್ರತಿಪಾದಿಸಿದ್ದಾರೆ. ಅವರ ಆಶಯದ ಫಲವಾಗಿ ಈ ರೋ-ರೋ ಸೇವೆ ಆರಂಭಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೊಲ್ಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ರೋಲ್ ಆನ್ ರೋಲ್ ಆಫ್ ರೈಲು ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್ ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್, ಶಾಸಕರಾದ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಿಎಂ, ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೊಲ್ಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ರೋ-ರೋ( Roll on-Roll off) ರೈಲು ಸೇವೆಯ ಚೊಚ್ಚಲ ಪ್ರಯಾಣಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದೇನೆ. ಸರಕು ಸರಂಜಾಮು ಸಹಿತವಾದ ಅಥವಾ ಖಾಲಿ ಇರುವ 42 ಟ್ರಕ್‍ಗಳನ್ನು ಈ ರೋ-ರೋ ರೈಲಿನ ಮೇಲೆ ಲೋಡ್ ಮಾಡಿ ಸಾಗಿಸಬಹುದಾಗಿದೆ. ನೆಲಮಂಗಲ ಹಾಗೂ ಬಾಲೆಯಲ್ಲಿ ಈ ಟ್ರಕ್‍ಗಳನ್ನು ರೈಲಿಗೆ ಹತ್ತಿಸುವ ಹಾಗೂ ರೈಲಿಗೆ ಇಳಿಸುವಂತಹ ಕಾರ್ಯ ನಡೆಯುತ್ತದೆ. ರಸ್ತೆ ಮೂಲಕ ಸಂಚರಿಸುವ ಟ್ರಕ್‍ಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಕ್ಷಿಪ್ರವಾಗಿ ಟ್ರಕ್‍ಗಳನ್ನು ಹಾಗೂ ಸರಕು ಸಾಮಗ್ರಿಗಳನ್ನು ಈ 2 ನಗರಗಳ ನಡುವೆ ಸಾಗಿಸಬಹುದಾಗಿದೆ ಎಂದು ಹೇಳಿದರು.
ಗೋದಾಮುಗಳಿಂದ ಅಥವಾ ಮಾರುಕಟ್ಟೆಯಿಂದ ಲೋಡ್ ಆದಂತಹ ಟ್ರಕ್‍ಗಳು ರೈಲ್ವೆ ನಿಲ್ದಾಣದಲ್ಲಿ ಬಂದು ರೈಲಿನಲ್ಲಿ ಲೋಡ್ ಆಗುತ್ತವೆ. ರೈಲುಗಳ ಮೂಲಕ ಈ ಟ್ರಕ್‍ಗಳು ಮತ್ತೊಂದು ನಗರಕ್ಕೆ ಬಂದು ಸರಕು ಸರಂಜಾಮುಗಳೊಂದಿಗೆ ಗೋದಾಮು ಅಥವಾ ಮಾರುಕಟ್ಟೆಗೆ ಹೋಗಿ ಹೊತ್ತು ತಂದ ಗೂಡ್ಸ್ಅನ್ನು ಅನ್‍ಲೋಡ್ ಮಾಡಲು ಈ ವ್ಯವಸ್ಥೆಯಿಂದ ಸಹಕಾರಿಯಾಗುತ್ತದೆ ಎಂದರು.
ಇಂತಹ ಒಂದು ರೋ-ರೋ ರೈಲಿನಲ್ಲಿ ಸರಕು ಹಾಗೂ ಟ್ರಕ್‍ಗಳೆರಡರ ಭಾರವು ಸೇರಿ 1,260 ಟನ್ ಭಾರವನ್ನು ಸಾಗಿಸಬಹುದಾಗಿದೆ. ಈ ವ್ಯವಸ್ಥೆ ಪರಿಸರ ಸ್ನೇಹಿಯಾಗಿದ್ದು, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಟ್ರಕ್‍ಗಳ ಧೀರ್ಘ ಬಾಳಿಕೆಗೆ ಸಹಕಾರಿಯಾಗುತ್ತದೆ. ಬೆಂಗಳೂರಿನಿಂದ ತರಕಾರಿ, ತೆಂಗಿನ ಕಾಯಿ ಅಡಿಕೆ ತೋಟಗಾರಿಕೆ ಉತ್ಪನ್ನಗಳು ಕೈಗಾರಿಕಾ ಉತ್ಪನ್ನಗಳನ್ನು ಸೊಲ್ಲಾಪುರಕ್ಕೆ ಸಾಗಿಸಲು ಹಾಗೂ ಸೊಲ್ಲಾಪುರದಿಂದ ಈರುಳ್ಳಿ, ಬೇಳೆ ಕಾಳುಗಳು ಮುಂತಾದ ಸರಕುಗಳನ್ನು ಬೆಂಗಳೂರಿಗೆ ಸಾಗಿಸಲು ನೆರವಾಗಲಿದೆ ಎಂದು ತಿಳಿಸಿದರು.
ನೆಲಮಂಗಲದ ಹತ್ತಿರ ಇರುವ ಎ.ಪಿ.ಎಂ.ಸಿ ಮಾರುಕಟ್ಟೆ, ಪೀಣ್ಯ ಹಾಗೂ ನೆಲಮಂಗಲ ಭಾಗದಲ್ಲಿರುವ ಅನೇಕ ಕೈಗಾರಿಕೆಗಳು ಹಾಗೂ ಸಾರಿಗೆ ಸಂಸ್ಥೆಗಳು ಇದರಿಂದ ಅನುಕೂಲ ಪಡೆಯಲಿವೆ. ಈ ಮೊದಲು ಕೊಂಕಣ್ ರೈಲ್ವೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೋ-ರೋ ಸೇವೆಯನ್ನು ಬೆಂಗಳೂರು ಮತ್ತು ಸೊಲ್ಲಾಪುರದ ಮಧ್ಯೆ ಆರಂಭಿಸುತ್ತಿರುವುದಕ್ಕೆ ರೈಲ್ವೆ ಇಲಾಖೆಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.