ಬೆಂಗಳೂರು: ಬಹಳ ವರ್ಷಗಳಿಂದ ಬೋವಿ ಸಮಾಜ ನಮ್ಮ ಜೊತೆ ಇದ್ದು, ಅದರ ಪರಿಣಾಮವಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಸಮಾರಂಭದಲ್ಲಿ ಹೇಳಿದರು.
ಓದಿ: ರಾಜ್ಯದಲ್ಲಿಂದು 408 ಕೋವಿಡ್ ಪಾಸಿಟಿವ್: ಮಹಾಮಾರಿಗೆ 3 ಮಂದಿ ಬಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಜಾತಿಗಳು ಗೊತ್ತಿಲ್ಲ. ಸಿದ್ಧರಾಮೇಶ್ವರ ವಿಚಾರ ಬಹಳ ದೊಡ್ಡದಾಗಿದ್ದು, ಆ ಬಗ್ಗೆ ನಾವು ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಮನುಷ್ಯ ಉತ್ತಮವಾಗಿ ಬದುಕಲು ವಚನಗಳ ಅಗತ್ಯವಿದೆ. ಅಂತಹ ವಚನ ಸಾಹಿತ್ಯಕ್ಕೆ ಸಿದ್ಧರಾಮೇಶ್ವರ ಕೊಡುಗೆ ಅಪಾರ ಎಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಬಸವಣ್ಣನ ಆರಾಧಕರು, ಅವರ ವಿಚಾರ ಪರಿಪಾಲಕರು ಬಿ ಎಸ್ ಯಡಿಯೂರಪ್ಪ. ನಿಜವಾದ ಸಾಮಾಜಿಕ ನ್ಯಾಯ ಬಸವಣ್ಣನವರ ಸಂಸತ್‌ನಲ್ಲಿ ನೋಡಬಹುದು. ಇಂತ ಸಂದರ್ಭದಲ್ಲಿ ಸಂಪುಟ ರಚನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಮ್ಮ ಬೋವಿ ಸಮಾಜದ ರಾಜ್ಯಾಧ್ಯಕ್ಷ ಅರವಿಂದ ಲಿಂಬಾವಳಿಗೂ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ರಾಜಕೀಯ ಹೊರತುಪಡಿಸಿ ನಮ್ಮವರಿಗೆ ಸಚಿವ ಸ್ಥಾನ ಬೇಕು ಎಂದು ಕೇಳಿದ್ದೆವು. ನಿಮ್ಮ ಸಮಾಜದವರು ಚದುರಿ ಹೋಗಿದ್ದಾರೆ, ಅವರನ್ನ ಒಟ್ಟುಗೂಡಿಸಿ ಅಂತ ಯಡಿಯೂರಪ್ಪ ಅವರು ತಿಳಿಸಿದ್ದರು. ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ, ನಾನು ವಿದ್ಯಾರ್ಥಿಯಾಗಿದ್ದೆ. ಬೋವಿ ಸಮಾಜ ಇಷ್ಟು ದೊಡ್ಡ ಸಂಘಟನೆಯಾಗಿ ಬೆಳೆಯಲು ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂದು ಹೇಳಿದ್ರು.
ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಡಿಸಿಎಂ ಗೋವಿಂದ ಕಾರಜೋಳ, ನೂತನ ಸಚಿವ ಅರವಿಂದ ಲಿಂಬಾವಳಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಶಾಸಕ ವಿಶ್ವನಾಥ್ ಉಪಸ್ಥಿತರಿದ್ದರು.