ಬೆಂಗಳೂರು: ಕೋವಿಡ್-19 ನಂತಹ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಮುಂದೆ ಬಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿಲುವು ಅಭಿನಂದನಾರ್ಹವಾಗಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಕೊರೊನಾ ವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಕೊರೊನಾದಿಂದ ಇಡೀ ಜಗತ್ತು ತತ್ತರಿಸುತ್ತಿದೆ. ಇದಕ್ಕೆ ದೇಶ, ರಾಜ್ಯ ಕೂಡ ಹೊರತಲ್ಲ. ಈ ಹಂತದಲ್ಲಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಅತ್ಯಂತ ಮಹತ್ವದ್ದಾಗಿದೆ. ಇದು ದೇಶದ ಆರೋಗ್ಯ ಕ್ಷೇತ್ರದ ಸವಾಲು ಎದುರಿಸಲು ಸಹಕಾರಿಯಾಗಲಿದೆ. ಇದು ದೇಶದ ಆರೋಗ್ಯ ಸುರಕ್ಷತೆಗೆ ಉಪಯೋಗಕರವಾಗಿದೆ. ಅಲ್ಲದೇ ಕೊರೊನಾ ಲಸಿಕೆ ಅಭಿವೃದ್ಧಿ ದೇಶದ ಭವಿಷ್ಯದಲ್ಲಿ ಎದುರಾಗುವ ಪಿಡುಗುಗಳನ್ನು ಎದುರಿಸಲು ಸಹಕಾರಿಯಾಗಿದೆ ಎಂದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿದರು ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್, ಐಸಿಎಂಆರ್, ಎನ್ ಐ ಬಿ ಸಹಭಾಗಿತ್ವದಲ್ಲಿ ಸಂಶೋಧನೆ ಮಾಡಿದೆ.ಯೂರೋಪ್ ನಲ್ಲಿಯೂ ಈಗಾಗಲೇ ಮೂರನೇ ಹಂತದ ಲಸಿಕೆ ಪ್ರಯೋಗ ಆರಂಭಗೊಂಡಿದೆ. ನಮ್ಮಲ್ಲಿಯೂ ವೈದೇಹಿ ಆಸ್ಪತ್ರೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಮುಂದೆ ಬಂದಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಆತ್ಮನಿರ್ಭರ ಭಾರತ್ ಯೋಜನೆಯಡಿ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಐತಿಹಾಸಿಕ ಮೈಲಿಗಲ್ಲಾಗಲಿದೆ. ಮೂರನೇ ಹಂತದ ಲಸಿಕೆಯ ಮಾನವ ಪ್ರಯೋಗದ ಫಲಿತಾಂಶ ಸಕಾರಾತ್ಮಕವಾಗಿ ಹೊರಹೊಮ್ಮಲಿದೆ ಎನ್ನುವ ನಿರೀಕ್ಷೆ ಇದೆ. ರಾಜ್ಯದ ಯುವಕರು ಸ್ವಯಂ ಪ್ರೇರಣೆಯಿಂದ ಕ್ಲಿನಿಕಲ್ ಟ್ರಯಲ್ ಗೆ ಮುಂದೆ ಬರಬೇಕು. ಆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಈ ಕುರಿತು ಮಾತನಾಡಿದ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೋವಿಡ್ ಮಹಾಮಾರಿ ವಿರುದ್ಧ ವೈದೇಹಿ ಸಂಸ್ಥೆ ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸುತ್ತಿರುವುದು ಸಂತಸದ ಸುದ್ದಿ, ಕೋವಿಡ್ ಮಹಾಮಾರಿ ತೊಲಗಿಸಲು ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ರೋಗ ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಕಂಡು ಹಿಡಿಯುವ ಅಗತ್ಯವಿದೆ. ದೇಶದ ಭವಿಷ್ಯಕ್ಕಾಗಿ ಇನ್ನಷ್ಟು ಕಂಪನಿಗಳು ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಕೋವಿಡ್-19 ಸೋಂಕು ಹರಡದಂತೆ ತಡೆಯಲು ಸರ್ಕಾರ ಬದ್ಧವಾಗಿದೆ. ಲಸಿಕೆ ಮತ್ತು ಸಂಶೋಧನೆಗಾಗಿ 900 ಕೋಟಿ ರೂ. ಮೀಸಲು ಇಡಲಾಗಿದೆ. ಹಾಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು 300 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು, ಇದೀಗ ದಿನಕ್ಕೆ 1 ಲಕ್ಷ 25 ಸಾವಿರ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ 1 ಕೋಟಿ 20 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ ಎಂದರು.