ಬೆಂಗಳೂರು : ಸದ್ಯಕ್ಕೆ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ತಕ್ಷಣವೇ ತಜ್ಞರ ಸಮಿತಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮೂರು ತಿಂಗಳಲ್ಲಿ ಮೈ ಶುಗರ್ ಪುನಶ್ಚೇತನ : ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಮೈ ಶುಗರ್ ಕಾರ್ಖಾನೆ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಮೈ ಶುಗರ್ ಪುನಶ್ಚೇತನಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಂಬಂಧ ಈ ಮುಂಚೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸದ್ಯಕ್ಕೆ ವಾಪಸ್ ಪಡೆಯಲಾಗುತ್ತದೆ. ಎರಡು ವರ್ಷ ಸರ್ಕಾರದ ಸುಪರ್ದಿಯಲ್ಲೇ ಕಾರ್ಖಾನೆ ಪುನಶ್ಚೇತನಗೊಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ. ಪುನಶ್ಚೇತನ ಸಂಬಂಧ ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಮೂರು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದು ತಿಳಿಸಿದರು.
ಮುಂದಿನ ವರ್ಷದಿಂದ (ಮುಂದಿನ ಹಂಗಾಮು) ಕಬ್ಬು ನುರಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ತಕ್ಷಣ ಮೈ ಶುಗರ್ ಕಾರ್ಖಾನೆಗೆ ಎಂಡಿ(MD-Managing Director) ನೇಮಕ, ಅಗತ್ಯ ಹಣ ಬಿಡುಗಡೆ ಹಾಗೂ ಬೇಕಾದ ಎಲ್ಲಾ ಯಂತ್ರೋಪಕರಣ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುತ್ತದೆ. ಕೂಡಲೇ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಅಗತ್ಯ ಮಷಿನರಿ ಸರಿಪಡಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು. ಖಾಸಗೀಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸ್ ಪಡೆಯುತ್ತೇವೆ.
ಅಗತ್ಯ ಹಣಕಾಸು ನೆರವು ನೀಡಲಾಗುವುದು. ತಜ್ಞರ ಸಮಿತಿ ನೀಡುವ ವರದಿ ಆಧಾರದ ಮೇಲೆ ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಶಾಲೆ ಆರಂಭ ವಿಚಾರ : ಶಾಲೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಎಕ್ಸ್‌ಪರ್ಟ್ ಕಮಿಟಿ ವರದಿ ನೀಡಿದೆ. ಶಿಕ್ಷಣ ಆಯುಕ್ತರು ಹಾಗೂ ಕಾರ್ಯದರ್ಶಿ ಜೊತೆ ಚರ್ಚೆ ಮಾಡುತ್ತೇವೆ. ಶಾಲೆ ಆರಂಭ ಮಾಡಬೇಕಾ ಅಂತಾ ತೀರ್ಮಾನ ಮಾಡುತ್ತೇವೆ ಎಂದರು.
ವಾಸ್ತವ ಸಮಸ್ಯೆ ಸಿಎಂ ಮುಂದಿಟ್ಟಿದ್ದೇವೆ : ಎಂಪಿ ಸುಮಲತಾ
ಸಭೆ ಬಳಿಕ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ಇವತ್ತಿನ ಸಭೆಯಲ್ಲಿ ವಾಸ್ತವ ಸಮಸ್ಯೆ ಸಿಎಂ ಮುಂದಿಟ್ಟಿದ್ದೇವೆ. ರೈತರಿಗೆ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಿ ಅಂತಾ ಸಭೆಯಲ್ಲಿ ಹೇಳಿದೆ. ಒಟ್ಟಿನಲ್ಲಿ ಕಾರ್ಖಾನೆ ಪುನಾರಂಭ ಆಗಬೇಕು. ಯಾವ ಮಾದರಿಯಲ್ಲಿ ಆರಂಭ ಆಗಬೇಕು ಅಂತಾ ಸರ್ಕಾರ ನಿರ್ಧರಿಸಲಿ ಎಂದು ತಿಳಿಸಿದರು.
ನಮಗೆ ಸಿಹಿ ನೀಡಿದ್ದಾರೆ : ಶಾಸಕ ಅನ್ನದಾನಿ
ಇದೇ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ, ಮಂಡ್ಯ ಜಿಲ್ಲೆ ರೈತರು ಒಂದು ತಿಂಗಳಿಂದ ಹೋರಾಟ ಮಾಡಿದ್ದರು. ಸಿಎಂ ಬೊಮ್ಮಾಯಿ ಸರ್ಕಾರವೇ ಕಾರ್ಖಾನೆ ನಡೆಸೋದಾಗಿ ಭರವಸೆ ನೀಡಿದ್ದಾರೆ. ನಮಗೆ ಸಿಹಿ ನೀಡಿದ್ದಾರೆ. ಖಾಸಗೀಕರಣಗೊಳಿಸಬಾರದು ಅಂತಾ ಒಂದು ದಿನ ಪಾದಯಾತ್ರೆ ನಡೆಸಿದ್ದೆವು. ಆ ಹೋರಾಟಕ್ಕೆ ಸ್ಪಂದಿಸಿ, ಸಿಎಂ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸೋದಾಗಿ ಭರವಸೆ ನೀಡಿದ್ದಾರೆ ಎಂದರು.
ಸಿಎಂಗೆ ಅಭಿನಂದಿಸಿದ ಬಡಗಲಪುರ ನಾಗೇಂದ್ರ
ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಸರ್ಕಾರವೇ ಕಾರ್ಖಾನೆ ನಡೆಸಲು ತೀರ್ಮಾನ ಮಾಡಿದೆ. ರೈತರ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡು ವರ್ಷ ಸರ್ಕಾರವೇ ಕಾರ್ಖಾನೆ ನಡೆಸಲು ತೀರ್ಮಾನ ಮಾಡಿದೆ. ಎರಡು ವರ್ಷದ ಬಳಿಕ ನೋಡಿಕೊಂಡು ಮುಂದೆ ಮತ್ತೆ ಚರ್ಚೆ ಮಾಡೋಣ ಎಂದಿದ್ದಾರೆ. ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಹೀಗಾಗಿ, ನಮ್ಮ ಹೋರಾಟವನ್ನು ಕೈಬಿಡಲು ಮಂಡ್ಯಗೆ ಹೋಗಿ ತೀರ್ಮಾನ ಮಾಡ್ತೇವೆ ಎಂದರು.
ಓದಿ: ಪೊಲೀಸರನ್ನು ಕೇಸರೀಕರಣ ಮಾಡಿರುವುದಕ್ಕೆ ಆಕ್ಷೇಪಿಸಿದ್ದೇನೆ ಅಷ್ಟೇ: ಸಿದ್ದರಾಮಯ್ಯ