ಬೆಂಗಳೂರು: ಬಿಬಿಎಂಪಿ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಮತದಾರರರನ್ನು ಸೆಳೆಯಲು ಸಿಎಂ ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ. ಇಂದು ಶಾಂತಿನಗರ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ವಿವಿಧ ಕಾಮಗಾರಿ ವೀಕ್ಷಣೆ ಹಾಗೂ ಉದ್ಘಾಟನಾ ಕಾರ್ಯ ನೆರವೇರಿಸಿದರು. ಶಾಂತಿನಗರ ನೂತನ ರಾಜಕಾಲುವೆಗೆ ಭೇಟಿ ನೀಡಿದ್ದು, ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ರಾಜಕಾಲುವೆ, ನಾಗರಿಕ ಜಲಮಾರ್ಗ ರಾಜ ಕಾಲುವೆ, ನೂತನವಾಗಿ ನಿರ್ಮಾಣಗೊಂಡಿರುವ ದೊಡ್ಡ ರಾಜಕಾಲುವೆಯನ್ನು ವೀಕ್ಷಿಸಿದರು.
ಗಾಂಧಿಬಜಾರ್‌ನಲ್ಲಿ ಬಹುಮಹಡಿಯ ವಾಹನ ನಿಲ್ದಾಣದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ, ಧರ್ಮರಾಯ ದೇವಸ್ಥಾನ ವಾರ್ಡ್‌ನಲ್ಲಿ ಬಹುಮಹಡಿಯ ವಸತಿ ಕಟ್ಟಡದ ಉದ್ಘಾಟನೆ, ಈ ಹಿಂದೆ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಸಿಎಂ ಮುಂದಾಗಿದ್ದಾರೆ. ಈಗಾಗಲೇ ರಾಜರಾಜೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದ ಸಿಎಂ, ಇಂದು ಚಿಕ್ಕಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಉದ್ಘಾಟನಾ ಕಾರ್ಯಕ್ರಮ ಕೈಗೊಳ್ಳಲಿರುವ ಸಿಎಂ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಿದ್ದಾರೆ. ದಿಢೀರ್ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿರುವ ಸಿಎಂ, ಆ ಮೂಲಕ ಬೆಂಗಳೂರಲ್ಲಿ ಅಭಿವೃದ್ಧಿ ಹೆಸರಲ್ಲಿ ಮತ ಕೇಳಲು ಮುಂದಾಗಿದ್ದಾರೆ.
ವಿದ್ಯಾರ್ಥಿ ಭವನದಲ್ಲಿ ಉಪಹಾರ: ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದ ನಡುವೆ ಮುಖ್ಯಮಂತ್ರಿಗಳು ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದರು. ಕಂದಾಯ ಸಚಿವ ಆರ್.ಅಶೋಕ್, ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಹಿರಿಯ ಅಧಿಕಾರಿಗಳ ಜೊತೆ ದೋಸೆ ಸವಿದರು.
ಇದನ್ನೂ ಓದಿ: ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ: 2ನೇ ಸುತ್ತಿನಲ್ಲೂ ಹುಕ್ಕೇರಿ ಮುನ್ನಡೆ