ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಸಮಸ್ಯೆಗಳ ವಿಚಾರವಾಗಿ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರು ಕಳಕಳಿ ಇಟ್ಟುಕೊಂಡೇ ಟ್ವೀಟ್ ಮಾಡಿರುತ್ತಾರೆ. ಅವರ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದರು.
ಆರ್.ಟಿ. ನಗರದಲ್ಲಿರುವ ಗಣೇಶ ದೇವಸ್ಥಾನಕ್ಕೆ ತೆರಳಿ ಸಿಎಂ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾರತ್ ಹಳ್ಳಿ ಸುತ್ತಮುತ್ತ ನಾಳೆ ಪರಿಶೀಲನೆ ಮಾಡುತ್ತೇನೆ. ಹಿಂದೆಂದೂ ಕಂಡುಕೇಳರಿಯದಷ್ಟು ಮಳೆ ಬಂದಿದೆ. ನಾಲ್ಕೈದು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದೆ. ಎನ್ಡಿಆರ್ಎಫ್ ಹಾಗೂ ಬಿಬಿಎಂಪಿ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಇಂದು ಸಂಜೆ ಸಭೆ: ಬೆಂಗಳೂರಲ್ಲಿ ಎಡಬಿಡದೆ ಮಳೆ ಸುರಿದು ರಸ್ತೆಗಳು ಹದಗೆಟ್ಟ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಂದು ಸಂಜೆ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಮ್ಮ ಮೊದಲ ಆದ್ಯತೆ ರಕ್ಷಣಾ ಕಾರ್ಯ ಎಂದರು.
ನಾಳೆ ಸಿಟಿ ರೌಂಡ್ಸ್: ಇವತ್ತು ಗಣೇಶ ಹಬ್ಬ ಇರುವುದರಿಂದ ಸಿಟಿ ರೌಂಡ್ಸ್ಗೆ ಹೋದ್ರೆ ಜನರಿಗೆ ತೊಂದರೆ ಆಗಲಿದೆ. ಹಾಗಾಗಿ ಇಂದು ಪರಿಶೀಲನೆಗೆ ಹೋಗಲ್ಲ. ನಾಳೆ ಮಧ್ಯಾಹ್ನ ಬೆಂಗಳೂರು ರೌಂಡ್ಸ್ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಪಿಒಪಿ ಗಣಪತಿ ನಿರಾಕರಿಸಿ, ಜೇಡಿಮಣ್ಣಿನ ಮೂರ್ತಿ ಮನೆಗೆ ತನ್ನಿ: ಸಿಎಂ
ಗಣೇಶ ಚತುರ್ಥಿಯ ಈ ಪವಿತ್ರ ಸಂದರ್ಭದಲ್ಲಿ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ರಾಜ್ಯದ ಸಮಸ್ತ ಜನರ ವಿಘ್ನಗಳನ್ನು ದೂರ ಮಾಡು ಎಂದು ವಿಘ್ನನಿವಾರಕನನ್ನು ಪ್ರಾರ್ಥಿಸಿದ್ದೇನೆ. ನಾಡಿನ ಜನತೆಗೆ ಗೌರಿ, ಗಣೇಶ ಹಬ್ಬದ ಶುಭಾಶಯ ಎಂದು ಸಿಎಂ ಹೇಳಿದರು.