ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆಯೂ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸುತ್ತಿರುವ ನಳಿನ್ ಕುಮಾರ್ ಕಟೀಲ್ಗೆ ಅಭಿನಂದನೆ ಸಲ್ಲಿಸಿದರು. ಕಟೀಲ್ ಅವರು ಪಕ್ಷವನ್ನು ಸಮರ್ಥವಾಗಿ ಕಟ್ಟಿದ್ದಾರೆ. ಹಲವು ಸಲ ರಾಜ್ಯ ಪ್ರವಾಸ ಮಾಡಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ. ಅವರ ನೇತೃತ್ವದಲ್ಲಿ ಉಪ ಚುನಾವಣೆ, ಸ್ಥಳೀಯ ಸಂಸ್ಥೆ, ಪರಿಷತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದರು.
ಕಟೀಲ್ ನೇತೃತ್ವದಲ್ಲಿಯೇ ಮುಂದುವರೆಯುತ್ತಿದ್ದೇವೆ, ಪಕ್ಷ ಇನ್ನಷ್ಟು ಬಲಗೊಳ್ಳಲಿದೆ. ಕಟೀಲ್ ಬದಲಾವಣೆ ವಿಷಯ ಕೇವಲ ಊಹಾಪೋಹ, ಈ ಕುರಿತು ಪಕ್ಷದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯಾಧ್ಯಕ್ಷರಾಗಿ ಅವರೇ ಮುಂದುವರೆಯಲಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ ಸಂಬಂಧ ಯಾವುದೇ ಗೊಂದಲ ಇಲ್ಲ ನಿನ್ನೆ ಹಿರಿಯ ಅಧಿಕಾರಿಗಳ ಜತೆ ಕಂದಾಯ ಸಚಿವರು ಚರ್ಚಿಸಿದ್ದಾರೆ ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ವ್ಯಾಪಕ ಮಳೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಇವತ್ತು ಸಾಯಂಕಾಲ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಯಾವ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿದೆ, ಅಲ್ಲಿನ ಪರಿಸ್ಥಿತಿ ನೋಡಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು, ಅದೆಲ್ಲವನ್ನೂ ನೋಡುತ್ತೇನೆ ಎಂದರು.
ಇದನ್ನೂ ಓದಿ: ನಳಿನ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ 3 ವರ್ಷ ಪೂರ್ಣ: ಪಕ್ಷದ ನಾಯಕರಿಂದ ಶುಭ ಹಾರೈಕೆ