ಬೆಂಗಳೂರು: ಖಾತೆ ಬಗೆಗಿನ ಅಸಮಾಧಾನ ಕುರಿತು ಹೈಕಮಾಂಡ್ ಈವರೆಗೂ ಏನೂ ಸೂಚನೆ ನೀಡಿಲ್ಲ. ಇಂದೇ ಆನಂದ್ ಸಿಂಗ್ಗೆ ಬರುವಂತೆ ಸೂಚನೆ ನೀಡಿದ್ದೇನೆ. ಆನಂದ ಸಿಂಗ್ ಜೊತೆಗೆ ಮಾತುಕತೆ ನಡೆಸಿದ ನಂತರ ಹೈಕಮಾಂಡ್ ಜೊತೆ ಈ ಸಂಬಂಧ ಮಾತುಕತೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನಂದ ಸಿಂಗ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರು ಬೆಂಗಳೂರಿಗೆ ಬಂದ ನಂತರ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಯಾವುದೋ ಒಂದು ಭಾವನಾತ್ಮಕ ಗಳಿಗೆಯಲ್ಲಿ ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಶಾಂತವಾಗಿ ಕುಳಿತುಕೊಂಡು ಮಾತನಾಡಿ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಮಾತನಾಡುತ್ತೇನೆ. ನಾನೊಬ್ಬನೇ ಅಲ್ಲ, ನಮ್ಮ ಪಕ್ಷವಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ಆನಂದ್ ಸಿಂಗ್ ಸ್ನೇಹಿತರು ಮಾತನಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರದ ಪ್ರಮುಖರು ಕೂಡ ಅನಂದ ಸಿಂಗ್ ಜೊತೆ ಮಾತುಕತೆ ನಡೆಸಲಿದ್ದಾರೆ. ಎಲ್ಲರೂ ಮಾತನಾಡಿದ ನಂತರ ಅವರಿಗೆ ಒಂದು ಒಳ್ಳೆಯ ಮಾರ್ಗ ಸಿಗಲಿದೆ, ಎಲ್ಲವೂ ಒಳ್ಳೆಯದಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಅವರ ಬೇಡಿಕೆ ಬಗ್ಗೆ ಸಂಪೂರ್ಣವಾಗಿ ನಾವು ಮೇಲಿನವರೆಗೂ ಮಾತನಾಡಬೇಕಾಗಿದೆ. ಅವರು ನಾಳೆ ಬರಬೇಕಾಗಿತ್ತು. ಆದರೆ ಮಂಗಳೂರು ಪ್ರವಾಸದ ಕಾರಣ ಸಾಧ್ಯವಾದರೆ ಇಂದು ಬನ್ನಿ ಇಲ್ಲದಿದ್ದಲ್ಲಿ ನಾಡಿದ್ದು ಸಿಗೋಣ ಎಂದಿದ್ದೇನೆ. ಇಂದು ಸಂಜೆ ಬರುವ ಸಾಧ್ಯತೆ ಇದೆ. ಅವರು ಬರುತ್ತಿದ್ದಂತೆ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಪಕ್ಷದ ಹೈಕಮಾಂಡ್ನಿಂದ ಯಾವುದೇ ಸೂಚನೆ ಇಲ್ಲ. ಮೊದಲು ಆನಂದ ಸಿಂಗ್ ಜೊತೆ ಮಾತನಾಡುತ್ತೇನೆ. ನಂತರ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.