ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವ ಕುರಿತ ಅರ್ಜಿ ಪರಿಶೀಲಿಸಬಹುದು ಎಂದು ಹೈಕೋರ್ಟ್ ಆದೇಶಿಸಿದ್ದು, ಈ ಸಂಬಂಧ ನಾಳೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಸರ್ವೆ ನಂಬರ್ 40 ರ ಬಗ್ಗೆ ಸರ್ಕಾರ ಸೂಕ್ತ ನಿರ್ಣಯ ಮಾಡಬೇಕು ಎಂದು ವಿಭಾಗೀಯ ಪೀಠ ಆದೇಶ ನೀಡಿದೆ. ನಮ್ಮ ದೇಶ ಸರ್ವ ಜನಾಂಗದ ಧರ್ಮೀಯರು ಇರುವ ದೇಶ ಎನ್ನುವ ವಿಶ್ಲೇಷಣೆ ಆಗಿದೆ. ನ್ಯಾಯಾಲಯದ ಆದೇಶ ಸಂಪೂರ್ಣ ಪರುಪಾಲನೆ ಮಾಡುವ ಕುರಿತು ಎಜಿ, ಕಂದಾಯ ಸಚಿವರೊಂದಿಗೆ ಕುಳಿತು ನಾಳೆ ಸಭೆ ನಡೆಸುತ್ತೇನೆ. ಶಾಂತಿ ಕಾಪಾಡುವ ಜೊತೆಗೆ ಎಲ್ಲರ ಮನದಾಳದ ಇಚ್ಛೆ ಈಡೇರಿಸುವ ಕೆಲಸವಾಗಬೇಕಿದೆ ಎಂದರು.
ಚಾಮರಾಜಪೇಟೆ ಆಟದ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಗಣೇಶೋತ್ಸವಕ್ಕೆ ಅವಕಾಶ ಕೋರಿ ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ, ಕೋರ್ಟ್ ಆದೇಶ ಸಂಪುರ್ಣವಾಗಿ ಪರಿಶೀಲಿಸಿ ನಾಳೆ ಸಭೆ ನಡೆಸಿ ಅವಕಾಶ ನೀಡಬೇಕಾ? ನೀಡಿದಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವ ಕುರಿತು ಸಮಿತಿ ಮಾಡಿದ್ದಾರೆ. ಅದೇ ಬೇರೆ ಇದೇ ಬೇರೆ, ಅಲ್ಲಿ ಸುಪ್ರೀಂ ಕೋರ್ಟ್ ಆದೇಶ ಇದೆ. ಇಲ್ಲಿ ಹೈಕೋರ್ಟ್ ಆದೇಶ ಇದೆ. ಎಲ್ಲವನ್ನೂ ಗಮನಿಸಿ ಕಾನೂನು ಮತ್ತು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಹೋರಿಗಳ ನಿರ್ವಹಣೆಗೆ ತಿಂಗಳಿಗೆ ಲಕ್ಷಗಟ್ಟಲೆ ಖರ್ಚು: ಬಾದಾಮಿ, ಅಂಜೂರ, ಹಾಲು, ಮೊಟ್ಟೆ, ತುಪ್ಪವೇ ಆಹಾರ