ಬೆಂಗಳೂರು/ಹಾವೇರಿ : 'ಇಬ್ರೂ ಗಂಡುಮಕ್ಕಳು ಸತ್ ಹೋಗ್ಯಾರ, ಮನಿ ಕಟ್ಟಸಿ ಕೊಡ್ರಿ ಸಾಹೇಬ್ರಾ' ಎಂದು ಗದ್ಗದಿತಳಾಗಿ ನುಡಿದಿದ್ದ ತವರು ಜಿಲ್ಲೆಯ ಕಮಲವ್ವನಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕಮಲವ್ವ ಸ್ವಂತ ಸೂರಿನಡಿ ಸಂಕ್ರಾಂತಿ ಆಚರಿಸುವಂತೆ ಮಾಡಿದ್ದಾರೆ.
ಜನರ ಸಂಕಷ್ಟ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದ ಮುಖ್ಯಮಂತ್ರಿಗಳನ್ನು ಕಂಡು ಸಿಎಂ ಬೊಮ್ಮಾಯಿಯವರ ಸ್ವಕ್ಷೇತ್ರ ಶಿಗ್ಗಾಂವಿಯ ಮಂಚಿನಕೊಪ್ಪ ಗ್ರಾಮದ ಕಮಲವ್ವ ತಿಮ್ಮನಗೌಡ್ರ ತನ್ನ ಸಂಕಷ್ಟ ತೋಡಿಕೊಂಡಿದ್ದರು. ಭಾರಿ ಮಳೆಗೆ ಸೂರು ಕಳೆದುಕೊಂಡಿದ್ದನ್ನು ಹೇಳಿಕೊಂಡು ನೆರವಿನ ಹಸ್ತ ಕೇಳಿದ್ದರು.
ತಮಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಜಿಲ್ಲಾಡಳಿತಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾಲ್ಕೇ ತಿಂಗಳಿನಲ್ಲಿ ಮನೆ ನಿರ್ಮಿಸಿ, ಸಂಕ್ರಾಂತಿಯಂದು ಕಮಲವ್ವನಿಗೆ ಮನೆಯನ್ನು ಹಸ್ತಾಂತರಿಸಲಾಯಿತು.

ಹ್ಯಾಬಿಟ್ಯಾಟ್ ಸೆಂಟರ್ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಸವಣೂರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಕಮಲವ್ವಗೆ ಹಸ್ತಾಂತರಿಸಿದರು. ಈ ಕುರಿತಂತೆ ಪತ್ರಿಕಾ ಹೇಳಿಕೆ ಮೂಲಕ ಸಿಎಂ ಮಾಹಿತಿ ನೀಡಿದ್ದಾರೆ.