ಬೆಂಗಳೂರು: ನಾಡಪ್ರಭು ಕೆಂಪೇಗೌಡ ಹಾಗೂ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗಾಗಿ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ಮತ್ತು ಭೂಮಿಪೂಜೆ ನೆರವೇರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಮುಂದೆ ಕನ್ನಡ ನಾಡಿನಲ್ಲಿ ಹುಟ್ಟಿ ಕ್ರಾಂತಿ ಮಾಡಿದ ಇಬ್ಬರು ಮಹಾನ್ ನಾಯಕರ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಪ್ರತಿಮೆ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ: ಮಹಾನ್ ಪುರುಷರಾದ ಬಸವಣ್ಣನವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಚಾರಿಕ ಪ್ರಗತಿ ಮಾಡಿ ನಾಡಿಗೆ ಕೊಡುಗೆ ಕೊಟ್ಟಿದ್ದಾರೆ. ನಾಡಪ್ರಭು ಕೆಂಪೇಗೌಡರು ಊರು, ಕೇರಿ, ಕೆರೆಗಳನ್ನು ಕಟ್ಟಿ ಮಾದರಿಯಾದ ಮಹಾನ್ ನಾಯಕರು. ಈ ಇಬ್ಬರ ಮೂರ್ತಿಗಳನ್ನು ವಿಧಾನಸೌಧ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ, ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಜತೆ ಚರ್ಚಿಸಲಾಗಿದೆ. ಸಚಿವ ಆರ್. ಅಶೋಕ್ ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಂದೂವರೆ ಎರಡು ತಿಂಗಳಲ್ಲಿ ಈ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಎಲ್ಲಾ ಪರಮಪೂಜ್ಯರ ಸಾನಿಧ್ಯದಲ್ಲಿ ಶಂಕುಸ್ಥಾಪನೆ ಮಾಡಿದ್ದೇವೆ. ಈ ಮಹಾನ್ ವ್ಯಕ್ತಿಗಳ ಆಡಳಿತ, ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಕರ್ನಾಟಕ ಸಮಗ್ರ ಅಭಿವೃದ್ಧಿಯ ರಾಜ್ಯವಾಗಬೇಕು. ಇಬ್ಬರು ಮಹಾತ್ಮರ ಪ್ರೇರಣೆ, ವೈಚಾರಿಕ ವಿಚಾರ ನಿಲ್ಲಲಿ ಎಂಬ ಕಾರಣಕ್ಕಾಗಿ ಈ ಪ್ರತಿಮೆಗಳನ್ನು ಮಾಡಿದ್ದೇವೆ ಎಂದರು.
ಪ್ರತಿಪಕ್ಷ ನಾಯಕರು ಗೈರು: ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಪ್ರತಿಪಕ್ಷದ ನಾಯಕರು ಯಾರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತ್ರ ಉಪಸ್ಥಿತರಿದ್ದರು.
ಇದು ಬಹಳ ದಿನಗಳ ಕನಸು- ಆರ್.ಅಶೋಕ್: ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಹಾಗೂ ಪ್ರತಿಮೆ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಆರ್. ಅಶೋಕ್ ಮಾತನಾಡಿ, ಪುತ್ಥಳಿ ಅನಾವರಣ ಬಹಳ ದಿನಗಳ ಕನಸು. 75 ವರ್ಷಗಳಿಂದ ಪುತ್ಥಳಿ ಅನಾವರಣ ಸಾಧ್ಯವಾಗಿರಲಿಲ್ಲ. ಇನ್ನೂ ಒಂದೂವರೆ ತಿಂಗಳಲ್ಲಿ ಪ್ರತಿಮೆ ಅನಾವರಣ ಮಾಡುತ್ತೇವೆ. ಅಂದಿನ ಕಾರ್ಯಕ್ರಮಕ್ಕೂ ನೀವೆಲ್ಲರೂ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ಸಿ.ಸಿ ಪಾಟೀಲ್, ಗೋವಿಂದ ಕಾರಜೋಳ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಮಹಾಸ್ವಾಮಿ, ಆದಿಚುಂಚನಗಿರಿ ಮಠದ ಜಗದ್ಗುರು ನಿರ್ಮಲಾನಂದನಾಥ ಮಹಾಸ್ವಾಮಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಮಹಾಸ್ವಾಮಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಾಳೆ ವಿಧಾನಸೌಧದ ಮುಂಭಾಗ ಕೆಂಪೇಗೌಡ - ಜಗಜ್ಯೋತಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ