ಬೆಂಗಳೂರು: ನ.1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಆಯ್ಕೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಮಹತ್ವದ ಮಾತುಕತೆ ನಡೆಯಿತು. 2022ನೇ ಸಾಲಿನ ಪ್ರಶಸ್ತಿಗೆ ಅರ್ಹ ಮಹನೀಯರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿಯು ವಿವಿಧ ಕ್ಷೇತ್ರಗಳ ಒಟ್ಟು 30ಕ್ಕೂ ಹೆಚ್ಚು ಸದಸ್ಯರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಈ ಬರಿ ಒಟ್ಟು 67 ಸಾಧಕರನ್ನು ಗುರುತಿಸಿ ರಾಜೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಸಮಿತಿ ಸಿದ್ದಪಡಿಸಿದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಅಂತಿಮಗೊಳಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬಹುತೇಕ ಪಟ್ಟಿ ಅಂತಿಮಗೊಂಡಿದ್ದು, ಸದ್ಯದಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ವಿ.ಸುನಿಲ್ ಕುಮಾರ್, ಶಿವರಾಂ ಹೆಬ್ಬಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ಗಣ್ಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ