ಬೆಂಗಳೂರು : ನಮ್ಮ ತಾಯಿಗೆ ಕ್ಯಾನ್ಸರ್ ಆಗಿತ್ತು. ಆಗ ಎಲ್ಲ ಚಿಕಿತ್ಸೆ ಕೊಟ್ರು ಉಳಿಯುತ್ತಾರೋ ಇಲ್ವೋ ಅನ್ನೋದು ಗೊತ್ತಿರಲಿಲ್ಲ. ಆಗ ಇಷ್ಟು ಟೆಕ್ನಾಲಜಿ ಇರಲಿಲ್ಲ. ಈಗ ತುಂಬಾ ಚೆನ್ನಾಗಿ ವ್ಯವಸ್ಥೆ ಇದ್ದು, ಕ್ಯಾನ್ಸರ್ನ ಸ್ಟೇಜ್ 1 ಹಾಗೂ ಸ್ಟೇಜ್ 2 ನಲ್ಲಿಯೇ ಪತ್ತೆ ಹಚ್ಚಿ ಶೇ.80ರಷ್ಟು ಗುಣಪಡಿಸಬಹುದು. ಆಗ ಕ್ಯಾನ್ಸರ್ ಬಂದ್ರೆ ಸಾವು ಒಂದೇ ಖಚಿತ ಎಂಬಂತಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಒಪಿಡಿ ಬ್ಲ್ಯಾಕ್ ಉದ್ಘಾಟನೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಮಾತಾನಾಡಿದರು. ಕಿದ್ವಾಯಿ ನಿರ್ದೇಶಕರಾದ ರಾಮಚಂದ್ರರವರು ಇವತ್ತು ಏನೇನು ಲೋಕಾರ್ಪಣೆ ಮಾಡಿಸಿದ್ರು ನನಗೆ ಗೊತ್ತಿಲ್ಲ. ಅತ್ಯುತ್ತಮ ಕೆಲಸ ಮಾಡಿದ್ದು, ನಾನು ಕೇವಲ ರಿಬ್ಬನ್ ಕಟ್ ಮಾಡಿದ್ದೇನೆ ಅಷ್ಟೇ.. ನಾನು ನಮ್ಮಕ್ಕ ಸುಧಾ ಅಕ್ಕನಿಗೆ ದೊಡ್ಡ ನಮಸ್ಕಾರ ಮಾಡ್ತೇನೆ. ಐಶ್ವರ್ಯವಿರುತ್ತೆ ಆದ್ರೆ ಎಲ್ಲರಿಗೂ ದಾನ ಮಾಡೋ ಮನಸ್ಸಿರೋದಿಲ್ಲ. ಆದ್ರೆ, ಸುಧಾ ಅಕ್ಕನ ಹೃದಯ ನಿಜಕ್ಕೂ ಗ್ರೇಟ್ ಅಂತಾ ಸುಧಾಮೂರ್ತಿಯವರನ್ನ ಹೊಗಳಿದರು.
ಕಡಿಮೆ ದರದಲ್ಲಿ ಕ್ಯಾನ್ಸರ್ ಔಷಧಿ ಲಭ್ಯ : ಕ್ಯಾನ್ಸರ್ ರೋಗಿಗಳು ಸೇವಿಸುವ ಮಾತ್ರೆಗಳು ಬಹಳ ದುಬಾರಿ. ಹೀಗಾಗಿ, ಕಡಿಮೆ ದರದಲ್ಲಿ ಔಷಧಿ ಕೊಡುವಂತಹ ವ್ಯವಸ್ಥೆಯನ್ನ ಮಾಡ್ತೀನಿ. ರೋಗಿಗಳ ಅಟೆಂಡರ್ಸ್ಗೆ ಬೇಕಾಗಿರುವ ವ್ಯವಸ್ಥೆ ಕೂಡ ಮಾಡೋಣ ಅಂತಾ ಸಿಎಂ ಭರವಸೆ ನೀಡಿದರು.
ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿಯಲ್ಲಿನ 75,000 ಚದರ ಅಡಿ ವಿಸ್ತೀರ್ಣದ ಹೊರರೋಗಿ (ಒಪಿಡಿ) ಬ್ಲಾಕ್‌ನ ಚಾಲನೆ ನೀಡಲಾಗಿದೆ. ಈ ಹೊಸ ಒಪಿಡಿ ಬ್ಲಾಕ್‌ಗೆ ಇನ್ಫೋಸಿಸ್ ಫೌಂಡೇಷನ್ 25.5 ಕೋಟಿ ರೂ. ವೆಚ್ಚ ಮಾಡಿದ್ದು, ಇದು 12ಕ್ಕೂ ಹೆಚ್ಚು ಇಲಾಖೆಗಳ ವ್ಯಾಪ್ತಿ ಹೊಂದಿದೆ. ನಿತ್ಯ 1,800 ರೋಗಿಗಳಿಗೆ ಸ್ಥಳಾವಕಾಶ ಒದಗಿಸುವ ಗುರಿ ಹೊಂದಿದೆ.
ಹಣ ಇರುವುದು ಎಣಿಸಲಿಕ್ಕಾಗಿ ಅಲ್ಲ, ಹಣ ಇರುವುದು ಜನರಿಗಾಗಿ : ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ, ಕಿದ್ವಾಯಿ ಆಸ್ಪತ್ರೆಗೆ ನಾನು ಬಡ ಜನರಿಗಾಗಿ ಸಹಾಯ ಮಾಡಿದ್ದೇನೆ. ಶ್ರೀಮಂತರಿಗೆ ನಾನು ಏನು ಮಾಡೋದಿಲ್ಲ, ಬಡವರ ಆರೋಗ್ಯ ಚೆನ್ನಾಗಿ ಇರಬೇಕು. 2003ರಲ್ಲಿ ಧರ್ಮಶಾಲೆ ಮಾಡಿದ್ವಿ, ನಮ್ಮಿಂದ ಏನು ಸಾಧ್ಯವಿದೆ ಸರ್ಕಾರದ ಜೊತೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕೋವಿಡ್ ಸಮಯದಲ್ಲಿ ಅನೇಕರು ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲೇ ಇದು ಪ್ರಥಮ ದರ್ಜೆ ಆಸ್ಪತ್ರೆಯಾಗಬೇಕು. ಹಣ ಇರುವುದು ಎಣಿಸಲಿಕ್ಕಾಗಿ ಅಲ್ಲ, ಹಣ ಇರೋದು ಜನರಿಗಾಗಿ ಅಂತಾ ಹೇಳಿದರು. ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಹಲವು ಬಾರಿ ದುರದೃಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗಿದೆ.
ಇಂತಹ ಸಂಕಷ್ಟದಲ್ಲಿರುವ ಜನರಿಗೆ, ವಿಶೇಷವಾಗಿ ನಾವೆಲ್ಲರೂ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಿಲುಕಿರುವ ಸಂದರ್ಭದಲ್ಲಿ, ಜನರಿಗೆ ಸ್ವಚ್ಛ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಫೌಂಡೇಷನ್‌ನ ಒಂದು ಸಣ್ಣ ಪ್ರಯತ್ನವಾಗಿದೆ ಎಂದರು.
ಬ್ಲಡ್ ಮೊಬೈಲ್ ವ್ಯಾನ್ಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ:
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಶನ್ನ ಬ್ಲಡ್ ಮೊಬೈಲ್ ವ್ಯಾನ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗ ಇಂದು ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಸಂಚಾರಿ ರಕ್ತದಾನ ವಾಹನ ಜೊತೆಗೆ 300 ಯುನಿಟ್ಸ್ ರಕ್ತ ಹಸ್ತಾಂತರ ಕಾರ್ಯವನ್ನು ಸಹ ಸಚಿವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.