ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಕೆಲವೊಂದು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಹೊಸದಾಗಿ ಸರ್ಕಾರ ರಚನೆಯಾದ ಬಳಿಕ ಉಂಟಾಗಿದ್ದ ಖಾತೆ ಹಂಚಿಕೆಯ ಎಲ್ಲ ಭಿನ್ನಮತ ಶಮನಗೊಂಡಿವೆ. ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಮತ್ತೊಮ್ಮೆ ಸಚಿವ ಸಂಪುಟ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಸಹ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿರಿ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲು ಉನ್ನತ ಮಟ್ಟದ ಸಭೆ: ಸಚಿವೆ ಕರಂದ್ಲಾಜೆ
ಇಂದಿನ ಸಚಿವ ಸಂಪುಟದಲ್ಲಿ ಪ್ರಮುಖವಾಗಿ ಅನೇಕ ಮಹತ್ವದ ಯೋಜನೆಗಳಿಗೆ ಅನುಮೋದನೆ ಹಾಗೂ ಕೆಲವೊಂದು ಹೊಸ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಸಿಎಂ ಘೋಷಣೆ ಮಾಡಿರುವ ಕೆಲವೊಂದು ಯೋಜನೆಗಳಿಗೆ ಇಂದು ಅನುಮೋದನೆ ನೀಡುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನ ಸಿಎಂ ಭೇಟಿ ಮಾಡಿರುವ ಕಾರಣ, ಮೇಕೆದಾಟು ಯೋಜನೆ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.