ಬೆಂಗಳೂರು: ಮಹಾರಾಷ್ಟ್ರದಲ್ಲಿ ನೆಲೆಸಿರುವ ಕರ್ನಾಟಕ ಏಕೀಕರಣ ಹಾಗು ಸ್ವಾತಂತ್ರ್ಯ ಹೋರಾಟದಲ್ಲಿ ಕೆಲಸ ಮಾಡಿದ ಕನ್ನಡಿಗರಿಗೆ ಪಿಂಚಣಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಮರಾಠಿಗರಿಗೆ ಜೀವ ವಿಮೆ ಘೋಷಣೆ, ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಹೆಚ್ಚಳ ಮಾಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ನಡೆಸುತ್ತಿರುವ ವಿಚಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಜೆತ್ ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ನೀರಿನ ಸಮಸ್ಯೆ ಕೂಡಾ ಇತ್ತು. ನಾವು ಆ ತಾಲೂಕಿನ ಜನರಿಗೆ ನೀರು ಕೊಟ್ಟೆವು, ಎಲ್ಲ ಸವಲತ್ತು ಮಾಡಿದ್ದೆವು, ಜೆತ್ ತಾಲೂಕಿನ ಜನ ಕರ್ನಾಟಕ ಸೇರುವ ನಿರ್ಣಯವನ್ನೂ ಮಾಡಿದ್ದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೆವು. ನಮ್ಮ ಗಡಿ ಪ್ರಾಧಿಕಾರದಿಂದ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ಕೊಡುವ ತೀರ್ಮಾನ ಮಾಡಿದೆವು ಎನ್ನುತ್ತಾ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ, ಏಕೀಕರಣ ಹೋರಾಟ, ಸ್ವಾತಂತ್ರ್ಯ ಹೋರಾದಲ್ಲಿ ಕೆಲಸ ಮಾಡಿದವರಿಗೆ ಪಿಂಚಣಿ ಕೊಡುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ, ಇವರಿಗೆಲ್ಲ ಪಿಂಚಣಿ ಕೊಡ್ತೇವೆ ಎಂದಿರುವ ಸಿಎಂ ಬೊಮ್ಮಾಯಿ ಮಹಾರಾಷ್ಟ್ರ ಸರ್ಕಾರಕ್ಕೆ ಟಾಂಗ್ ನೀಡಿದರು.
ಎರಡು ರಾಜ್ಯಗಳ ಮಧ್ಯೆ ಸೌಹಾರ್ದತೆ ಇರಬೇಕು. ನಾವು ಎಲ್ಲ ಭಾಷಿಕರನ್ನೂ ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇದ್ದಾರೆ. ಅವರ ಹಿತರಕ್ಷಣೆಯನ್ನು ಮಾಡಬೇಕಾದ ಕರ್ತವ್ಯ ನಮ್ಮದು, ನಾವು ಆ ಕೆಲಸವನ್ನು ಮಾಡುತ್ತೇವೆ ಎಂದರು.
ಮರಾಠಿಗರ ನಿಯೋಗ ಭೇಟಿ ಮಾಡಿ ಎಂದು ಮಹಾ ಸಿಎಂ ಏಕನಾಥ ಶಿಂಧೆ ಕರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನಿಯೋಗ ಬರೋದು ದೊಡ್ಡ ವಿಷಯ ಅಲ್ಲ. ನಮ್ಮ ನಿಯೋಗ ಅವರು ಭೇಟಿ ಮಾಡೋದು, ಅವರ ನಿಯೋಗ ನಾವು ಭೇಟಿ ಮಾಡೋದು ಸಹಜ. ಇದೆಲ್ಲ ಪರಿಗಣನೆಗೆ ಬರಲ್ಲ, ಮಹಾರಾಷ್ಟ್ರ ಸರ್ಕಾರ ರಾಜ್ಯ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದೆ. ವ್ಯಾಜ್ಯ ಹಚ್ಚುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಮಾಡಬಾರದು ಎಂದು ಸಲಹೆ ನೀಡಿದರು.
ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಸಿಎಂ: ಚಿತ್ರದುರ್ಗ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ತೆರಳಿದರು. ಹವಾಮಾನ ವ್ಯತ್ಯಾಸ ಹಿನ್ನೆಲೆಯಲ್ಲಿ ರಸ್ತೆ ಮೂಲಕ ತೆರಳಿದರು. ಬಿಜೆಪಿ ಹಿರಿಯ ನಾಯಕ ಹಾಗೂ ಸಿಎಂ ಮಾಜಿ ಸಿಎಂ ಯಡಿಯೂರಪ್ಪ, ಗೋವಿಂದ ಕಾರಜೋಳ ಕೂಡ ಸಿಎಂ ಜೊತೆ ತೆರಳಿದರು.
ಇದನ್ನೂಓದಿ: ಮಹಾರಾಷ್ಟ್ರ ಜತೆ ಗಡಿ ವಿವಾದ: ಕನ್ನಡದ ಗಡಿ ರಕ್ಷಣೆಗೆ ಸರ್ಕಾರ ಸಶಕ್ತ- ಬೊಮ್ಮಾಯಿ