ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರ ಹೆಚ್ಚಿದೆ. ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಳೆಹಾನಿ ಪ್ರದೇಶಗಳ ಪ್ರದಕ್ಷಿಣೆ ನಡೆಸಿ, ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಮಹದೇವಪುರ ಹಾಗೂ ಬೊಮ್ಮನಹಳ್ಳಿ ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಇಂದು ಮಳೆ ಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದರು.
ಮೊದಲಿಗೆ ಮಾರತ್ತಹಳ್ಳಿ ಮುಖ್ಯರಸ್ತೆಯ ಡಿಎನ್ಎ ಅಪಾರ್ಟ್ಮೆಂಟ್ ಬಳಿ ವೀಕ್ಷಣೆ ನಡೆಸಿದರು. ಅಲ್ಲಿ 30 ಅಡಿ ಕಾಲುವೆಯನ್ನು 4 ಅಡಿ ಅಗಲಕ್ಕೆ ಒತ್ತುವರಿ ಮಾಡಲಾಗಿತ್ತು. ಕೂಡಲೇ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈಟ್ಫೀಲ್ಡ್ನಲ್ಲಿ ಸಿಎಂ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ ಮಾಡಿದರು. ಸ್ಥಳೀಯರು ಮಳೆಯಿಂದಾದ ಹಾನಿಯನ್ನು ಸಿಎಂ ಗಮನಕ್ಕೆ ತಂದಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ, ಬಿ. ಎ. ಬಸವರಾಜ ಬೈರತಿ, ಶಾಸಕ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒತ್ತುವರಿ ತೆರವುಗೊಳಿಸಿ: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದೊಂದು ವಾರದಿಂದ ಮಳೆ ಬರ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತೀ ಹೆಚ್ಚು ಹಾನಿ, ಸಮಸ್ಯೆ ಆಗಿದೆ. ಈ ಭಾಗಗಳಲ್ಲಿ ಹೆಚ್ಚು ಕೆರೆಗಳಿರೋದಿಕ್ಕೆ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ, ರಾಜಾಕಾಲುವೆಗಳಿಗೆ ಹರಿದಿದೆ. ಕೆರೆ ನೀರು, ಮಳೆ ನೀರು ಸೇರಿ ರಾಜಕಾಲುವೆ ಸಾಮರ್ಥ್ಯ ಮೀರಿ ಹರಿದು ಸಮಸ್ಯೆ ಆಗಿದೆ. ಒತ್ತುವರಿ ತೆರವು ಬಳಿಕ ರಾಜಾ ಕಾಲುವೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ಒತ್ತುವರಿ ತೆರವಿಗೆ ಸೂಚನೆ: ಎಲ್ಲ ಕಡೆ ಎಸ್ಟಿಮೇಟ್ ಮಾಡಿ ರಾಜಾಕಾಲುವೆಗಳ ನಿರ್ಮಾಣ ಮಾಡ್ತೇವೆ. ಶಾಶ್ವತ ರಾಜಾ ಕಾಲುವೆಗಳ ನಿರ್ಮಾಣ ಪ್ರಾಶಸ್ತ್ಯದಲ್ಲಿ ಮಾಡ್ತೇವೆ. ರಾಜಾ ಕಾಲುವೆಗಳ ಒತ್ತುವರಿಯಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಅಧಿಕಾರಿಗಳಿಗೆ ಸಿಎಂ ತರಾಟೆ: ಪರಿಶೀಲನೆ ಬಳಿಕ ಮಹಾದೇವಪುರ ಕ್ಷೇತ್ರದ ಪ್ರಮುಖರು, ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಮಹಾದೇವಪುರ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಸಿಎಂಗೆ ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ ಪಾಲಿಕೆ ಅಧಿಕಾರಿಗಳನ್ನು ಸಿಎಂ ತಾರಟೆಗೆ ತೆಗೆದುಕೊಂಡರು.
ಸಮಸ್ಯೆ ಬಗೆಹರಿಸ್ತೇವೆ : ಒತ್ತುವರಿ ವಿಚಾರಕ್ಕೆ ಪಾಲಿಕೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆದರು. ನಿಮ್ಮ ಕೆಲಸ ಆತ್ಮಸಾಕ್ಷಿಗನುಗುಣವಾಗಿ ಇರಲಿ. ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಈಗಿನ ಸಮಸ್ಯೆಗೆ ಹಿಂದಿನ ಸರ್ಕಾರಗಳು ಕಾರಣವಾಗಿದೆ. ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ಕಾರಣವಾಗಿದೆ.
ಒತ್ತುವರಿ ಆಗಲು ಹಿಂದಿನವರೇ ಕಾರಣ. ಹಿಂದೆ ಒತ್ತುವರಿ ಮಾಡೋಕ್ಕೆ ಯಾಕೆ ಬಿಡಬೇಕಿತ್ತು?. ಒತ್ತುವರಿ ಆಗುವಾಗಲೇ ತಡೆಯಬೇಕಿತ್ತು. ಆಗ ನೀವೆಲ್ಲ ಏನು ಮಾಡ್ತಿದ್ರಿ?. ನಿಯಮಗಳ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಟ್ಟಿಲ್ಲ. ಇದಕ್ಕೆಲ್ಲ ಹಿಂದೆ ಆಡಳಿತ ಮಾಡಿದವರು ಉತ್ತರ ಕೊಡಬೇಕು. ನಾವು ಪಲಾಯನ ಮಾಡ್ತಿಲ್ಲ, ಸಮಸ್ಯೆ ಬಗೆಹರಿಸ್ತೇವೆ ಎಂದರು.
ಅಕ್ರಮ ಬಯಲಿಗೆ ಬರಲಿ: ಮಳೆ ನೀರು ಕಾಲುವೆಗಳ ನಿರ್ಮಾಣ, ನಿರ್ವಹಣೆಯಲ್ಲಿ ಲೋಪವಾಗಿದೆ. ಇದರ ಬಗ್ಗೆ ತನಿಖೆ ಮಾಡಿಸ್ತೇನೆ. ಮಳೆ ನೀರು ಕಾಲುವೆಗಳಲ್ಲಿ ನಡೆದಿರುವ ಅಕ್ರಮ ಬಯಲಿಗೆ ಬರಲಿ. ಕಳೆದ ಏಳೆಂಟು ವರ್ಷಗಳಿಂದ ಏನೆಲ್ಲ ಕೆಲಸ ಆಗಿದೆ. ಟೆಂಡರ್ ಯಾರಿಗೆ ಕೊಡಲಾಗಿತ್ತು, ಏನೆಲ್ಲ ಕೆಲಸ ಆಗಿದೆ ಆಗಿಲ್ಲ ಅಂತ ತನಿಖೆ ನಡೆಸಿ, ಲೋಪಗಳನ್ನು ಮಾಡಿದವರ ವಿರುದ್ಧ ಕ್ರಮ ತಗೋತೇವೆ ಎಂದು ಹೇಳಿದರು.
ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆಗೆಯಿರಿ. ಯಾರಿದ್ದಾರೆ ಒತ್ತುವರಿಗಳ ಹಿಂದೆ?. ಯಾರೇ ದೊಡ್ಡವರಿರಲಿ, ರಾಜಕಾರಣಿಗಳಿರಲಿ, ಬಿಲ್ಡರ್ಗಳಿರಲಿ ಮಾಹಿತಿ ಕೊಡಿ. ಒತ್ತುವರಿದಾರರ ಬಗ್ಗೆ ವರದಿ ಕೊಡಿ, ಕ್ರಮ ತಗೋತೀವಿ ಎಂದು ಸೂಚಿಸಿದರು.
ಓದಿ: ಹಾವೇರಿಯಲ್ಲಿಇಲಿ ವಾರ ಸಂಭ್ರಮ.. ಗಣೇಶ ಹಬ್ಬದ ಮರುದಿನ ಮೂಷಿಕನಿಗೆ ಪ್ರಾಶಸ್ತ್ಯ