ಬೆಂಗಳೂರು: ಸಚಿವ ಸಂಪುಟ ರಚನೆ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ತೆರಳುವುದಾಗಿ ಹೇಳಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಈಗ ಸಂಪುಟ ರಚನೆ ವಿಷಯ ಚರ್ಚಿಸಲ್ಲ ಕೇವಲ ಅಭಿವೃದ್ಧಿ ವಿಷಯದ ಚರ್ಚೆ ಮಾತ್ರ ಎಂದು ದೆಹಲಿಗೆ ಹಾರಿದ್ದಾರೆ. ಒಂದೇ ದಿನದಲ್ಲಿ ಯೂ ಟರ್ನ್ ಹೊಡೆದಿದ್ದಾರೆ ಇದಕ್ಕೆ ಕಾರಣ ರಾಜಕೀಯ ಗುರು ಬಿಎಸ್ವೈ ತಂತ್ರಗಾರಿಕೆ ಎನ್ನಲಾಗುತ್ತಿದೆ.
ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಕೇಂದ್ರದ ವೀಕ್ಷಕರಾಗಿ ಬಂದಿದ್ದ ಧರ್ಮೇಂದ್ರ ಪ್ರಧಾನ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ರಾಜಕೀಯ ವಿಚಾರದ ಕುರಿತು ಮಹತ್ವದ ಸಭೆ ನಡೆಸಿದ್ದರು. ನೆರೆ ಹಾವಳಿ, ಕೊರೊನಾ ಮೂರನೇ ಅಲೆಗೆ ತಯಾರಿಯಾಗಬೇಕಿದೆ. ಹಾಗಾಗಿ ಸಂಪುಟ ರಚನೆ ವಿಳಂಬವಾಗಬಾರದು ಎನ್ನುವ ಬೇಡಿಕೆ ಇಟ್ಟಿದ್ದರು. ಕೂಡಲೇ ಈ ಸಂಬಂಧ ಹೈಕಮಾಂಡ್ ನಾಯಕರನ್ನು ಸಂಪರ್ಕ ಮಾಡಿದ್ದ ಅರುಣ್ ಸಿಂಗ್ ಜುಲೈ 30 ರಂದು ಸಮಯ ನಿಗದಿಪಡಿಸಿ ದೆಹಲಿಗೆ ಬಂದು ಮಾತುಕತೆ ನಡೆಸುವಂತೆ ಸೂಚಿಸಿದ್ದರು.
ಸಚಿವ ಸ್ಥಾನಕ್ಕಾಗಿ ಸಚಿವಾಕಾಂಕ್ಷಿಗಳಿಂದ ಒತ್ತಡ, ತಂತ್ರ, ಲಾಬಿಗಳು ತೀವ್ರವಾಗತೊಡಗಿದವು. ಯಡಿಯೂರಪ್ಪ ನಿವಾಸ, ಬೊಮ್ಮಾಯಿ ನಿವಾಸಕ್ಕೆ ಮನವಿ ಹಿಡಿದು ಬರುವವರ ಸಂಖ್ಯೆ ಹೆಚ್ಚಾಯಿತು. ಹಾಗಾಗಿ ಆಕಾಂಕ್ಷಿಗಳ ಒತ್ತಡ ಹೆಚ್ಚಾಗುವುದನ್ನು ತಡೆಯಲು ಬಿಎಸ್ವೈ ಸೂಚನೆಯಂತೆ ಸಚಿವ ಸಂಪುಟ ರಚನೆ ಕುರಿತು ಈ ಬಾರಿಯ ದೆಹಲಿ ಭೇಟಿಯಲ್ಲಿ ಚರ್ಚೆ ಮಾಡುವುದಿಲ್ಲ. ಅದಕ್ಕಾಗಿ ಮುಂದಿನ ವಾರ ಮತ್ತೊಮ್ಮೆ ತೆರಳುತ್ತೇನೆ ಎನ್ನುವ ಹೇಳಿಕೆ ನೀಡಿದರು. ಆಕಾಂಕ್ಷಿಗಳು ನಿವಾಸದತ್ತ ಬರುವುದನ್ನು ಕಡಿಮೆಯಾಗುವಂತೆ ಮಾಡುವುದು ಸಿಎಂ ಉದ್ದೇಶವಾಗಿದ್ದು, ಅದರಲ್ಲಿ ಸಫಲತೆಯನ್ನು ಕಂಡಿದ್ದಾರೆ.
ಕಾವೇರಿಯಲ್ಲಿ ಸಿದ್ದವಾಗಲಿದೆಯಾ ಸಚಿವರ ಪಟ್ಟಿ?
ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಹೈಕಮಾಂಡ್ಗೆ ಯಾವುದೆ ಹೆಸರು ಶಿಫಾರಸು ಮಾಡಲ್ಲ. ಎಲ್ಲಾ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಹೇಳಿದ್ದ ಯಡಿಯೂರಪ್ಪ ಎಲ್ಲರ ಗಮನ ಹೈಕಮಾಂಡ್ ಕಡೆಗೆ ತಿರುಗುವಂತೆ ಮಾಡಿದ್ದರು. ಕಾವೇರಿಯಲ್ಲೇ ನೂತನ ಸಿಎಂ ಯಾರು ಎನ್ನುವುದು ಅಂತಿಮವಾಗಲಿದೆ ಎನ್ನುವ ಸಣ್ಣ ಸುಳಿವನ್ನೂ ಕಡೆ ಕ್ಷಣದವರೆಗೂ ಬಿಟ್ಟುಕೊಟ್ಟಿರಲಿಲ್ಲ. ಅದೇ ತಂತ್ರವನ್ನು ಈಗ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಬೊಮ್ಮಾಯಿ ಮಾಡಲು ಹೊರಟಿದ್ದಾರೆ. ಹಾಗಾಗಿಯೇ ಹೈಕಮಾಂಡ್ ಭೇಟಿಗೆ ಆಕಾಂಕ್ಷಿಗಳು ದೆಹಲಿ ಯಾತ್ರೆ ಆರಂಭಿಸಿದ್ದಾರೆ. ಆದರೆ ಪಟ್ಟಿ ಬಹುತೇಕ ಕಾವೇರಿಯಲ್ಲೇ ಸಿದ್ಧವಾಗಲಿದೆ ಎನ್ನುವುದು ಮಾತ್ರ ಸತ್ಯ. ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ದೆಹಲಿ ಪ್ರವಾಸಕ್ಕೆ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಗೆ ದೆಹಲಿಗೆ ತೆರಳಬೇಕಿದ್ದ ಕಾರಣ ನಿನ್ನೆಯೇ ಯಡಿಯೂರಪ್ಪ ಅವರನ್ನು ಸಿಎಂ ಭೇಟಿಯಾಗಿದ್ದರು. ಉತ್ತರಕನ್ನಡ ಪ್ರವಾಸಕ್ಕೆ ತೆರಳುವ ಮೊದಲೆ ಕಾವೇರಿಗೆ ಭೇಟಿ ನೀಡಿದರು. ಈ ವೇಳೆ ಮುಖಂಡರ ಸಮ್ಮುಖದಲ್ಲಿ ಪರಸ್ಪರ ಕುಶಲೋಪರಿ ವಿಚಾರಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಪ್ರತ್ಯೇಕ ಮಾತುಕತೆ ಬೇಡಿಕೆ ಇರಿಸಿದರು. ಹಾಗಾಗಿ ಇಬ್ಬರೆ ಕಾವೇರಿಯಲ್ಲಿನ ಹಾಲ್ನಿಂದ ಎದ್ದು ಮೀಟಿಂಗ್ ಹಾಲ್ಗೆ ತೆರಳಿ ಕೆಲಕಾಲ ಮಾತುಕತೆ ನಡೆಸಿದರು.
ಬಹುತೇಕ ದೆಹಲಿ ಪ್ರವಾಸದ ಬಗ್ಗೆಯೆ ಮಾತುಕತೆ ನಡೆಯಿತು. ವರಿಷ್ಠರು ಸಮಯ ನೀಡಿದ್ದಾರೆ ಎನ್ನುವ ವಿಚಾರ ತಿಳಿಸಿದ ಸಿಎಂ, ದೆಹಲಿಯಲ್ಲಿ ಮಾತನಾಡಬೇಕಾದ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ವಲಸಿಗರ ವಿಚಾರದಲ್ಲಿ ಹೊಸ ಕಮಿಟ್ಮೆಂಟ್ಗೆ ಒಪ್ಪಬಾರದು ಎಂದು ಮಾಜಿ ಸಿಎಂ ಹಾಲಿ ಸಿಎಂಗೆ ಸೂಚನೆ ನೀಡಿದ್ದಾರೆ. ಮಾತು ತಪ್ಪಿದ ಅಪವಾದ ಮುಂದಿನ ಚುನಾವಣೆಗೆ ಮಾರಕವಾಗಲಿದೆ. ಹಾಗಾಗಿ ರಾಜೀನಾಮೆ ಕೊಟ್ಟು ಬಂದಿರುವವರನ್ನು ಸಂಪುಟಕ್ಕೆ ತೆಗೆದುಕೊಳ್ಳದೆ ಇರಲು ಸಾಧ್ಯವಿಲ್ಲ. ಇದು ನನ್ನ ನಿಲುವು, ಭವಿಷ್ಯದಲ್ಲಿ ಚುನಾವಣಾ ದೃಷ್ಟಿಯಿಂದ ಇದನ್ನ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಿ, ಸರ್ಕಾರ ರಚನೆಗೆ ಈಗ ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರಲು ಬಹುಮುಖ್ಯ ಕಾರಣರಾದವರ ಕಡೆಗಣನೆ ಸಲ್ಲದು ಎಂದು ಕಿವಿಮಾತು ಹೇಳಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಆಕಾಂಕ್ಷಿಗಳ ಒತ್ತಡ ತಂತ್ರಕ್ಕೆ ಕಡಿವಾಣ:
ಯಡಿಯೂರಪ್ಪ ಸಲಹೆಯಂತೆ ಸಂಪುಟ ರಚನೆ ಕುರಿತು ಹೊರಗಡೆ ಹೆಚ್ಚು ಚರ್ಚೆ ಆಗಬಾರದು. ಆಕಾಂಕ್ಷಿಗಳು ಆಗಮಿಸಿ ಒತ್ತಡ ಹೇರುವುದು ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಸಿಎಂ ಬೊಮ್ಮಾಯಿ ಈ ಬಾರಿಯ ದೆಹಲಿ ಭೇಟಿ ವೇಳೆ ಸಂಪುಟ ರಚನೆ ಚರ್ಚೆ ಮಾಡುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಆ ಮೂಲಕ ಆಕಾಂಕ್ಷಿಗಳ ಒತ್ತಡ ತಂತ್ರಕ್ಕೆ ಬ್ರೇಕ್ ಹಾಕಿದ್ದಾರೆ.
ಬಿಎಸ್ವೈ ಸೀಕ್ರೆಟ್ ಆಪರೇಷನ್?
ಇನ್ನು ಕಾವೇರಿಯಲ್ಲೇ ಸಚಿವರ ಪಟ್ಟಿ ಸಿದ್ಧವಾಗಿದೆ. ಈಗಾಗಲೇ ಯಡಿಯೂರಪ್ಪ ಯಾರಿಗೆಲ್ಲ ಅವಕಾಶ ಕೊಡಬೇಕು ಎನ್ನುವ ಕುರಿತು ಪಟ್ಟಿಯನ್ನು ಫೈನಲ್ ಮಾಡಿದ್ದು, ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ವಲಸಿಗರು, ಆಪ್ತರು ಮತ್ತು ಕೆಲ ಹೊಸ ಮುಖಗಳ ಹೆಸರನ್ನು ಒಳಗೊಂಡಿರುವ ಪಟ್ಟಿ ಈಗ ಸಿಎಂ ಜೇಬು ಸೇರಿದೆ. ಬಿಎಸ್ವೈ ನೀಡಿರುವ ಪಟ್ಟಿಯನ್ನೆ ಈಗ ಸಿಎಂ ಬೊಮ್ಮಾಯಿ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಬಿಎಸ್ವೈ ಮಾತ್ರ ಇದನ್ನು ಒಪ್ಪಲು ಸಿದ್ದರಿಲ್ಲ. ನಾನು ಸಂಪುಟ ರಚನೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎನ್ನುತ್ತಿದ್ದಾರೆ. ಆದರೆ ಸಿಎಂ ಆಯ್ಕೆಯಲ್ಲಿ ಕಾಯ್ದುಕೊಂಡು ಸೀಕ್ರೆಟ್ ಆಪರೇಷನ್ ಈಗ ಸಂಪುಟ ರಚನೆಯಲ್ಲೂ ಆಗುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: CBSE class 12 results: ಶೇ 99ರಷ್ಟು ವಿದ್ಯಾರ್ಥಿಗಳು ಪಾಸ್; ಈ ವರ್ಷ ಮೆರಿಟ್ ಲಿಸ್ಟ್ ಇಲ್ಲ