ಬೆಂಗಳೂರು: ಸಚಿವ ಆನಂದ್ ಸಿಂಗ್ ನನಗೆ ಮೂರು ದಶಕದ ಗೆಳೆಯ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ಕೂಡ ಮಾತನಾಡಿದ್ದೇನೆ. ಇವತ್ತು ಕೂಡ ಮಾತನಾಡುತ್ತೇನೆ. ಅವರ ವಿಚಾರ ನನಗೆ ಗೊತ್ತಿದೆ. ನಾನು ಹಲವಾರು ವಿಚಾರಗಳನ್ನು ಅವರಿಗೆ ಹೇಳಿದ್ದೇನೆ. ಅವರು ಬಂದು ಮಾತನಾಡಿದ ನಂತರ ಎಲ್ಲವೂ ಸರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆಯಂತಹ ಯಾವುದೇ ದಾರಿ ಹಿಡಿಯಲ್ಲ. ಎಲ್ಲವೂ ಅಂತಿಮವಾಗಿ ಸರಿಯಾಗಲಿದೆ. ಅಸಮಾಧಾನ ವಿಚಾರದಲ್ಲಿ ಇಲ್ಲಿ ನನ್ನ ಸೈಲೆನ್ಸ್ ಪ್ರಶ್ನೆಯಲ್ಲ. ನಾನು ಏನು ನಿರ್ಧಾರ ಮಾಡುತ್ತೇನೆ ಎನ್ನುವುದು ನಂತರ ನಿಮಗೆ ಗೊತ್ತಾಗಲಿದೆ. ಆನಂದ್ ಸಿಂಗ್ ಎಲ್ಲ ವಿಚಾರಗಳನ್ನು ನನಗೆ ಹೇಳಿದ್ದಾರೆ. ನಾನು ಅದನ್ನ ಚರ್ಚೆ ಮಾಡುತ್ತಿದ್ದೇನೆ. ಮತ್ತೆ ಅವರನ್ನು ಕರೆದು ಮಾತನಾಡುತ್ತೇನೆ. ಅವರ ಬಳಿ ಮಾತನಾಡುವುದು ಇನ್ನೂ ಇದೆ. ಎಲ್ಲವನ್ನು ಮಾತುಕತೆ ನಡೆಸಿ ನಿರ್ಧರಿಸಲಾಗುತ್ತದೆ. ನಾನು ಅವರ ಬಳಿ ಮಾತನಾಡಿದ ಮೇಲೆಯೇ ಮುಂದಿನ ನಿರ್ಧಾರವಾಗಲಿದೆ ಎಂದರು.
ಆನಂದ್ ಸಿಂಗ್ ಅವರಿಗೆ ಇಂದು ಬರಲು ತಿಳಿಸಿದ್ದೇನೆ. ನಾಳೆ ನಾನು ಇರುವುದಿಲ್ಲ, ಹಾಗಾಗಿ ಇಂದು ಬರಲು ಸಾಧ್ಯವಾಗದೇ ಇದ್ದಲ್ಲಿ ನಾಡಿದ್ದು ಬರಲು ಹೇಳಿದ್ದೇನೆ. ಈ ವಿಚಾರ ಕುರಿತು ಹೈಕಮಾಂಡ್ ಬಳಿ ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಸಚಿವ ಆನಂದ್ ಸಿಂಗ್ ಬರಲಿ, ಬಂದ ನಂತರ ಮಾತನಾಡುತ್ತೇನೆ. ಎಲ್ಲ ಸರಿಯಾಗಲಿದೆ ಎಂದು ಹೇಳಿದರು.
ಮತ್ತೋರ್ವ ಅಸಮಾಧಾನಿತ ಸಚಿವ ಎಂಟಿಬಿ ನಾಗರಾಜ್ ಜೊತೆಗೂ ಮಾತುಕತೆ ನಡೆಸಿದ್ದು, ಎಲ್ಲವೂ ಸರಿಯಾಗಿದೆ. ಅವರ ಸಮಸ್ಯೆ ಏನಿಲ್ಲ. ಆನಂದ್ ಸಿಂಗ್ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಹೇಳಿದರು.
ಓದಿ: ಅಧಿಕಾರ ಕಳೆದುಕೊಂಡಾಗಿನಿಂದ ಸಿದ್ದರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿವೆ: ಈಶ್ವರಪ್ಪ ವ್ಯಂಗ್ಯ