ಬೆಂಗಳೂರು: ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಿ ಅಪರಾಧವನ್ನು ಸಂಪೂರ್ಣವಾಗಿ ಸದೆಬಡಿಯುವ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಹೊಸ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ಹೇಳಿದ್ದೇನೆ. ದಕ್ಷತೆ, ಪ್ರಾಮಾಣಿಕತೆ ಇನ್ನೂ ಹೆಚ್ಚಾಗಬೇಕು. ಜನಸ್ನೇಹಿ ಆಗಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಅಪರಾಧವನ್ನು ಸಂಪೂರ್ಣವಾಗಿ ಸದೆಬಡಿದು ನಿಯಂತ್ರಣಕ್ಕೆ ತರಬೇಕು. ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ಏನೇನು ಸವಾಲುಗಳಿವೆ ಅನ್ನೋದನ್ನು ಹೇಳಿದ್ದೇನೆ. ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ಏನೇನಿದೆಯೋ ಅದನ್ನು ಮುಂದುವರಿಸುವ ಭರವಸೆ ನೀಡಿದ್ದೇನೆ. ಪೊಲೀಸ್ ಕಲ್ಯಾಣ ಕಾರ್ಯಕ್ರಮ ಮಾಡಬೇಕು. ಗೃಹ ಇಲಾಖೆ ಹೇಗಿರಬೇಕು ಎಂಬ ಬಗೆಗೂ ಗೃಹ ಸಚಿವರೂ ಕೂಡ ಹೇಳಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿರುವುದಾಗಿ ಸಿಎಂ ಹೇಳಿದರು.
'ಕೆಎಸ್ಈ ಪ್ರಚೋದನಕಾರಿ ಹೇಳಿಕೆ ಕೊಟ್ಟಿಲ್ಲ'
ಸಚಿವ ಕೆ.ಎಸ್.ಈಶ್ವರಪ್ಪ ಪ್ರಚೋದನಕಾರಿಯಾಗಿ ಹೇಳಿಕೆ ಕೊಟ್ಟಿಲ್ಲ. ಹಿಂಸೆಗೆ ಹಿಂಸೆ ಮದ್ದಲ್ಲ ಅನ್ನೋದು ಈಶ್ವರಪ್ಪಗೆ ಗೊತ್ತಿದೆ ಎಂದರು. ಅವರದ್ದು ಪ್ರಚೋದನಕಾರಿ ಹೇಳಿಕೆ ಅಲ್ಲ. ಅವರ ನೋವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ. ಈ ಹಿಂದೆ ಆಗಿದ್ದ ಕೊಲೆ ಪ್ರಕರಣ ಉಲ್ಲೇಖಿಸಿ ಈಶ್ವರಪ್ಪ ನೀಡಿದ ಹೇಳಿಕೆ ಅದಾಗಿದೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಪ್ರೀತಂಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೀವೇ ಹೇಳಿದಂತೆ ಅವರು ಮೊದಲ ಬಾರಿ ಶಾಸಕ. ಅವರು ನನ್ನ ಯುವ ಮಿತ್ರ. ಈಗಾಗಲೇ ಕರೆದು ಮಾತನಾಡಿದ್ದೇನೆ ಎಂದರು.
ಸಂಘಕ್ಕೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲರೂ ಸರ್ವಸ್ವತಂತ್ರರು. ಮಾತುಕತೆಯಲ್ಲಿ ನಂಬಿಕೆ ಇಟ್ಟವನು ನಾನು. ಮಾತನಾಡಿದರೆ ಎಲ್ಲವೂ ಬಗೆಹರಿಯುತ್ತದೆ ಎಂಬ ನಂಬಿಕೆ ನನಗಿದೆ ಎಂದರು.