ಬೆಂಗಳೂರು: ಇಂದು ಮುಕ್ತಾಯವಾದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯಕ್ಕೆ 7 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹರಿದು ಬರಲಿದೆ. 2025ರ ಜನವರಿಯಲ್ಲಿ ಮತ್ತೆ "ಇನ್ವೆಸ್ಟ್ ಕರ್ನಾಟಕ" ಸಮಾವೇಶ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಇಲ್ಲಿನ ಅರಮನೆ ಆವರಣದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಹೂಡಿಕೆದಾರರ ಸಮಾವೇಶ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗಲಿದೆ. ಕೋವಿಡ್ ಬಳಿಕ ರಾಜ್ಯದಲ್ಲಿ 13 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಮುಂದಿದ್ದು, ದೇಶದಲ್ಲಿ 2 ನೇ ಸ್ಥಾನದಲ್ಲಿದೆ ಎಂದರು.
ಸರಳ ಉದ್ಯಮ ನೀತಿಗಳನ್ನು ಕರ್ನಾಟಕ ಹೊಂದಿದೆ. ಸೆಮಿಕಂಡಕ್ಟರ್, ಆರ್ ಅಂಡ್ ಡಿ ಬೆಳವಣಿಗೆಗೆ ನಿಯಮ ರೂಪಿಸಿದೆ. ಐಐಟಿ, ಐಐಎಮ್, ಡಿ ಆರ್ಡಿಒ ರಾಜ್ಯದಲ್ಲಿವೆ. 5 ರಿಂದ 10 ಸಾವಿರ ಇಂಜಿನಿಯರ್‌ಗಳು ಆರ್ ಅಂಡ್ ಡಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬರುತ್ತಾರೆ. ಹ್ಯೂಮನ್ ಜೆನೆಟಿಕ್ಸ್‌ನಿಂದ ಸ್ಪೇಸ್‌ವರೆಗೂ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ರಾಜ್ಯದಲ್ಲಿ ಆಗುತ್ತಿದೆ ಎಂದು ಸಿಎಂ ತಿಳಿಸಿದರು.
ಕೆಲಸಗಳು ಪೇಪರ್‌ನಲ್ಲಿ ಅಲ್ಲ, ಜನರಿಗೆ ತಲುಪುವಂತೆ ಅನುಷ್ಠಾನವಾಗಬೇಕು. ಈ ಹಾದಿಯಲ್ಲಿ ಸರ್ಕಾರ ಸಾಕಷ್ಟು ಗಂಭೀರವಾಗಿ ಕೆಲಸ ಮಾಡುತ್ತಿದೆ. ಇಂದು ಸಹಿ ಹಾಕಿರುವ ಒಪ್ಪಂದಗಳು ಅನುಷ್ಠಾನವಾಗಬೇಕು. ಕೆಲವೇ ವರ್ಷದಲ್ಲಿ ಅನುಮತಿ, ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ರಾಜ್ಯ ಸರ್ಕಾರ ಹೂಡಿಕೆದಾರರ ನೀರಿಕ್ಷೆಯನ್ನು ಹುಸಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹೂಡಿಕೆ ಸಮಾವೇಶ ಸಾಕಾರವಾಯಿತು. ಕೇಂದ್ರ ಸರ್ಕಾರದ ಸಹಕಾರದಿಂದ ಕರ್ನಾಟಕ ಈ ಸಾಧನೆ ಮಾಡಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗಿದೆ. ಕೇಂದ್ರ ಸರ್ಕಾರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದೆ. ಕರ್ನಾಟಕ 1 ಟ್ರಿಲಿಯನ್ ಕೊಡುಗೆ ನೀಡಲಿದೆ. ಈಗಾಗಲೇ ಕರ್ನಾಟಕ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹೂಡಿಕೆದಾರರ ಹೆಗಲಿಗೆ ಹೆಗಲು ಕೊಟ್ಟು ಸರ್ಕಾರ ಕೆಲಸ ಮಾಡಲಿದೆ ಎಂದರು.
ಓದಿ: ಪಿಎಂಎಲ್‌ಎ ಪ್ರಕರಣ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ಗೆ ಡಿಕೆಶಿ ಅರ್ಜಿ ಸಲ್ಲಿಕೆ.. ಇಡಿಗೆ ನೋಟಿಸ್