ಬೆಂಗಳೂರು: ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡುವ ಮೂಲಕ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿಡುವ ಸರ್ಕಾರದ ಕಾರ್ಯದ ಜೊತೆ ನಾಡಿನ ಜನತೆ ಕೈ ಜೋಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬ ಹಾಗು ಮೊಹರಂ ಹಬ್ಬದ ಶುಭ ಕೋರಿದರು. ಪ್ರತಿಯೊಬ್ಬರೂ ಕೊರೊನಾ ನಿಯಂತ್ರಣಕ್ಕಾಗಿ ರೂಪಿಸಿರುವ ನಿಯಮಗಳನ್ನು ಪಾಲಿಸಿ ಸರ್ಕಾರಕ್ಕೆ ಸಹಕಾರ ನೀಡಬೇಕು. ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಆಗದಂತೆ ಸ್ವಯಂಪ್ರೇರಣೆಯಿಂದ ನೋಡಿಕೊಳ್ಳಬೇಕು ಎಂದರು.
ಕೊರೊನಾ ವಿಚಾರದಲ್ಲಿ ಈಗಿರುವ ನಿಯಂತ್ರಣ ಮುಂದುವರೆಯುವುದು. ಆರ್ಥಿಕ, ಶೈಕ್ಷಣಿಕ ದಿನನಿತ್ಯದ ಚಟುವಟಿಕೆಗಳಿಗೆ ಬಹಳ ಅವಶ್ಯಕತೆ ಇದೆ. ಹಾಗಾಗಿ ಎಲ್ಲರಿಗೂ ಕಳಕಳಿಯ ಮನವಿ ಮಾಡುತ್ತೇನೆ. ಕೊರೊನಾ ನಿಯಮ ಪಾಲಿಸಿ ಸರ್ಕಾರದಿಂದಿಗೆ ಕೋವಿಡ್ ನಿರ್ವಹಣೆಗೆ ಕೈಜೋಡಿಸಿ ಎಂದರು.
ಇಂದು ಅರಸು ಕಾರ್ಯಕ್ರಮದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದೇವೆ. ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು.