ಬೆಂಗಳೂರು: ಮೋದಿ ಸಮಯದಾಯದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ ಹಾಗೆ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬಗ್ಗೆ ಮಾತಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ಉತ್ತರ ಕೊಡ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಸಿದ್ದರಾಮಯ್ಯ ಹಿರಿಯರು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು. ಇದರಿಂದ ಎಲ್ಲರಿಗೂ ನೋವಾಗಿದೆ. ಇದೇ ಕಾಂಗ್ರೆಸ್ ಸಂಸ್ಕೃತಿ, ಇದು ಸಿದ್ದರಾಮಯ್ಯ ಘನತೆಗೆ ತಕ್ಕದಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ. ಯಾವುದೇ ಸಮಾಜದ ಸಿಎಂ, ಸಚಿವರು ಅವರ ಯೋಗ್ಯತೆ, ಕ್ಷಮತೆಯಲ್ಲಿ ಕೆಲಸ ಮಾಡ್ತಾರೆ. ಲೋಪದೋಷ ಆಗಿದ್ರೆ ಅದು ವೈಯಕ್ತಿಕ ಮಟ್ಟದಲ್ಲಿ ಆಗಿರುತ್ತಷ್ಟೇ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ" ಎಂದು ಟೀಕಿಸಿದರು.
ಬಸವ ಪ್ರತಿಮೆಗೆ ಮಾಲಾರ್ಪಣೆ: ಇವತ್ತು ಬಸವ ಜಯಂತಿ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧ ಮುಂಭಾಗದ ಬಸವ ಪ್ರತಿಮೆ ಹಾಗೂ ಚಾಲುಕ್ಯ ವೃತ್ತದಲ್ಲಿನ ಬಸವಣ್ಣರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವ ಆರ್ ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಈ ವೇಳೆ ಹಾಜರಿದ್ದರು.
ಜಯ ವಾಹಿನಿಗೆ ಚಾಲನೆ: ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಡೆ ಮಾಡಿ, ಜಯ ವಾಹಿನಿ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಸಿಎಂ ಅಧಿಕೃತ ಚಾಲನೆ ನೀಡಿದರು. ಇಂದಿನಿಂದ ಪ್ರಚಾರ ಶುರು ಮಾಡುತ್ತಿದೇವೆ. ಬಸವ ತತ್ವದಡಿ ಆಡಳಿತ, ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಇಂದು ರಾಜ್ಯಕ್ಕೆ ಮತ್ತೆ ಅಮಿತ್ ಶಾ ಆಗಮನ: ಚಾಮುಂಡೇಶ್ವರಿ ದರ್ಶನ ಪಡೆದು ಪ್ರಚಾರ ಆರಂಭಿಸಲಿರುವ ಬಿಜೆಪಿ ಚಾಣಕ್ಯ
ದಿನಪೂರ್ತಿ ಸಿಎಂ ಬೊಮ್ಮಾಯಿ ರೋಡ್ ಶೋ: ಇಂದು ದಿನಪೂರ್ತಿ ಸಿಎಂ ಬೊಮ್ಮಾಯಿ ರಾಜ್ಯದ ವಿವಿಧೆಡೆ ರೋಡ್ ಶೋ ನಡೆಸಿ ಮತಬೇಟೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಯಲಹಂಕದಲ್ಲಿ ರೋಡ್ ಶೋ ನಡೆಸಲಿರುವ ಬೊಮ್ಮಾಯಿ, ರಾತ್ರಿ 10.30 ರ ವರೆಗೆ ವಿವಿಧೆಡೆ ಭರ್ಜರಿ ರೋಡ್ ಶೋ ಹಾಗೂ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಇಂದು ಸುಮಾರು 11 ಕಡೆ ರೋಡ್ ಶೋ ನಡೆಸಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಜಯ ವಾಹಿನಿ ವಿಶೇಷ ವಾಹನ ಮೂಲಕ ರೋಡ್ ಶೋ ನಡೆಯಲಿದೆ.
ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸಪೇಟೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಗುಳೂರು, ಗುಬ್ಬಿ, ತುಮಕೂರು ಕೆ ಬಿ ಕ್ರಾಸ್, ತಿಪಟೂರು, ಅರಸೀಕೆರೆ, ಬಾಣಾವರ ಹಾಗೂ ಕಡೂರಿನಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಮಾವೇಶ ಮಾಡಲಿದ್ದಾರೆ. ರಾತ್ರಿ 10.30 ಕ್ಕೆ ಕಡೂರಿನಲ್ಲಿ ರೋಡ್ ಶೋ ಹಾಗೂ ಸಮಾವೇಶ ಮಾಡಿ ದಿನದ ಪ್ರಚಾರ ಅಂತ್ಯಗೊಳಿಸಲಿದ್ದಾರೆ.
ಇದನ್ನೂ ಓದಿ : ದ.ಕ ಜಿಲ್ಲೆಯ ಮೂವರು ಬಿಜೆಪಿ ನಾಯಕರು ಸಿಡಿ ರಿಲೀಸ್ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದೇಕೆ?: ಡಿಕೆಶಿ