ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಜನರ ಮನ ಗೆಲ್ಲುವ ಜೊತೆಗೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಚುನಾವಣೆಗೆ ಸಜ್ಜಾಗಿ ಎನ್ನುವ ಸಂದೇಶ ನೀಡಲು ಜನಸಂಕಲ್ಪ ಯಾತ್ರೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರೇಸ್ ಕೋರ್ಸ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಈಗ ಜನಸಂಕಲ್ಪ ಯಾತ್ರೆ ಪ್ರಾರಂಭ ಮಾಡುತ್ತಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಯಾತ್ರೆ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಕಾರ್ಯಕ್ರಮ, ಕೆಲಸಗಳು, ನೀತಿಗಳು ಮತ್ತು ಕೇಂದ್ರದ ಕಾರ್ಯಕ್ರಮಗಳು, ಒಂದೊಂದು ಕ್ಷೇತ್ರದಲ್ಲಿ ಸಾವಿರಾರು ಜನಕ್ಕೆ ಅನುಕೂಲವಾಗಿದೆ.
ಅದನ್ನು ಜನರಿಗೆ ಹೇಳಿ ಮುಂದಿನ ದಿನ ಯಾವ ವರ್ಗಕ್ಕೆ ಕಾರ್ಯಕ್ರಮ ಮಾಡಲಿದ್ದೇವೆ. ಯಾವ ರೀತಿ ಲಾಭ ತೆಗೆದುಕೊಳ್ಳಬೇಕು ಎಂದು ಹೀಗೆ ಹತ್ತು ಹಲವು ವಿಷಯ ಜನರಿಗೆ ತಿಳಿಸಲಿದ್ದೇವೆ. ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಚುನಾವಣೆಗೆ ಸಜ್ಜಾಗಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ಕಾರ್ಯಕ್ರಮ ಮಾಡಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ರಾಜ್ಯ ಪ್ರವಾಸ: ಜನಸಂಕಲ್ಪ ಯಾತ್ರೆಗೆ ನಾಳೆ ರಾಯಚೂರಿನಲ್ಲಿ ಚಾಲನೆ
ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ: ಎಲ್ಲಾ ಕಡೆ ಬಹಳ ಉತ್ಸಾಹ ಇದೆ. ನಾವು ದಿನಕ್ಕೆ ಎರಡು ವಿಧಾನ ಸಭಾ ಕ್ಷೇತ್ರದ ಪ್ರವಾಸ ಮಾಡಬೇಕು ಎಂದು ಚಿಂತನೆ ಮಾಡಿದ್ದೆವು. ಆದರೆ ಮೂರು ಕಡೆ ಮಾಡುವಂತೆ ಒತ್ತಾಯ ಬರುತ್ತಿದೆ. ಹಾಗಾಗಿ ಮೂರು ಕಡೆ ಪ್ರವಾಸಕ್ಕೆ ಪ್ರಯತ್ನಿಸಲಿದ್ದು, ಯಾತ್ರೆ ಮೂಲಕ ಜನರ ವಿಶ್ವಾಸಗಳಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಜನಸಂಕಲ್ಪ ಯಾತ್ರೆಯ ಪ್ರವಾಸದಲ್ಲಿ ಸಭೆಗಳು, ಸಮಾರಂಭಗಳು, ಫಲಾನುಭವಿಗಳ ಭೇಟಿ, ಕಾರ್ಯಕರ್ತರ ನಿವಾಸಗಳಿಗೆ ಭೇಟಿ ಇರಲಿದೆ. ಇದೆಲ್ಲವನ್ನೂ ಆಯಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಅಲ್ಲಿನ ನಾಯಕರು ಯಾವ ರೀತಿ ಕಾರ್ಯಕ್ರಮ ರೂಪಿಸುತ್ತಾರೋ ಅದರಲ್ಲಿ ನಾವು ತೆರಳಲಿದ್ದೇವೆ ಎಂದರು.
ಮೀಸಲಾತಿ ವಿಚಾರದಲ್ಲಿ ಸೂಕ್ತ ನಿರ್ಧಾರ: ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದ ನಂತರ ಬೇರೆ ಬೇರೆ ಸಮುದಾಯದಿಂದ ಮೀಸಲಾತಿ ಹೆಚ್ಚಿಸುವ ಬೇಡಿಕೆ ಬರುವುದು ಸಹಜ. ಅದರಂತೆ ಇತರ ಸಮುದಾಯಗಳು ಬೇಡಿಕೆ ಮಂಡಿಸುತ್ತಿವೆ. ಸಹಜವಾಗಿ ಈ ನಿರೀಕ್ಷೆ ಇದ್ದೇ ಇರಲಿದೆ. ಆದರೆ ನಾವು ಮೊದಲ ಹಂತವಾಗಿ ಎಸ್ಸಿ, ಎಸ್ಟಿ ತೆಗೆದುಕೊಂಡಿದ್ದೇವೆ. ಆ ವಿಚಾರದಲ್ಲಿ ಕಾನೂನಾತ್ಮಕ ಕೆಲಸ ಮಾಡುತ್ತಿದ್ದೇವೆ. ಹಿಂದುಳಿದ ವರ್ಗಗಳ ವಿಚಾರದಲ್ಲಿ ಆಯೋಗವಿದೆ. ಅದು ಎಲ್ಲ ನೋಡುತ್ತಿದೆ. ತಜ್ಞರಿದ್ದಾರೆ. ಆಯೋಗ ಏನು ಶಿಫಾರಸ್ಸು ಮಾಡಲಿದೆ, ತಜ್ಞರು ಏನು ಹೇಳುತ್ತಾರೆ ಎಲ್ಲ ನೋಡಿ ಅಂತಿವಾಗಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಮಾಹಿತಿ ನೀಡಿದರು.
ಅನುಮತಿ ಇಲ್ಲದೆ ಓಲಾ, ಉಬರ್, ಆಟೋ ಸೇವೆ ನೀಡುತ್ತಿರುವ ಕುರಿತು ನಿನ್ನೆ ಸಾರಿಗೆ ಇಲಾಖೆ ಆಯುಕ್ತರ ಕರೆದು ಸೂಚನೆ ನೀಡಿದ್ದೇನೆ. ಅನುಮತಿ ಇಲ್ಲದೆ ಯಾವುದೇ ಸೇವೆ ನೀಡದಂತೆ ಆದೇಶಿಸಬೇಕು. ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದರು.
ಭಾರತ್ ಜೋಡೋ ಯಾತ್ರೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ನಾವು ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದು ಯಾರನ್ನು ಜೋಡಿಸುತ್ತಿದೆ. ಯಾರನ್ನು ತೋಡೋ ಮಾಡುತ್ತಿದೆ ಎಂದು ಜಗತ್ತಿಗೆ ಗೊತ್ತಿದೆ. ನಾವು ನಮ್ಮ ಕಾರ್ಯಕ್ರಮದ ಮೂಲಕ ಜನರ ಬಳಿ ಹೋಗುತ್ತಿದ್ದೇವೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುನೀತ್ ಪತ್ನಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ನೆಚ್ಚಿನ ನಟ ಅಪ್ಪು ಅವರ ಗಂಧದ ಗುಡಿ ಸಿನಿಮಾದ ಪ್ರೀ ಇವೆಂಟ್ ಉದ್ಘಾಟನೆ ನಡೆಸಿಕೊಡಬೇಕು ಎಂದು ಪುನೀತ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇತರರು ಆಹ್ವಾನ ಕೊಟ್ಟಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಪುನೀತ್ ಪರ್ವ ಕಾರ್ಯಕ್ರಮಕ್ಕೆ ರಾಜ್ ಕುಟುಂಬದಿಂದ ಸಿಎಂಗೆ ಆಹ್ವಾನ