ಬೆಂಗಳೂರು: 2006ಕ್ಕೂ ಮೊದಲ ನೇಮಕ ಆಗಿರುವ ಉಪನ್ಯಾಸಕರಿಗೆ ಹಳೆ ಪಿಂಚಣಿ ಕೊಡುತ್ತೇವೆ. ನಂತರ ನೇಮಕಾತಿಯಾದವರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕೊಡಲಾಗುತ್ತದೆ. ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೂ ಎನ್ಪಿಎಸ್ ಕೊಡುವ ಬಗ್ಗೆ ನ್ಯಾಯ ಸಮ್ಮತವಾಗಿ ತೀರ್ಮಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು (ಗುರುವಾರ) ನಡೆದ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅನುದಾನಿತ ಶಿಕ್ಷಕರಿಗೆ ಹಳೆ ಅಥವಾ ಹೊಸ ಪಿಂಚಣಿ ವ್ಯವಸ್ಥೆ ಕೊಡಬೇಕು. ನಿನ್ನೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಅನುದಾನಿತ ಪದವಿ ಉಪನ್ಯಾಸಕರ ಪಿಂಚಣಿಗೆ 15 ಪರ್ಸೆಂಟ್ ಮ್ಯಾನೇಜ್ ಮೆಂಟ್ ಕೊಡಬೇಕು, 10 ಪರ್ಸೆಂಟ್ ನೌಕರರು ಕೊಡಬೇಕು, ಉದ್ಯೋಗಿ ಹಿತರಕ್ಷಣೆ ಮಾಡಲು ಈ ರೀತಿ ಕೊಡಬೇಕು, ಈಗಾಗಲೇ ಕಾರ್ಖಾನೆ ಮತ್ತು ಅದರ ಉದ್ಯೋಗಿಗಳು ಇದೇ ರೀತಿ ಕಾಂಟ್ರಿಬ್ಯೂಷನ್ ಕೊಡುತ್ತಿದ್ದಾರೆ ಎಂದರು.
2006ರ ಮೊದಲ ನೇಮಕವಾದವರಿಗೆ ಒಪಿಎಸ್ ಪಿಂಚಣಿ ಕೊಡಲಾಗುತ್ತಿದೆ. ನಂತರ ನೇಮಕವಾದವರಿಗೆ ಎನ್ಪಿಎಸ್ ಪಿಂಚಣಿ ಕೊಡಲಾಗಿದೆ. 2006ಕ್ಕಿಂತ ಮೊದಲು ನೇಮಕಾತಿ ಆಗಿ 2006 ರ ನಂತರ ಕೆಲಸಕ್ಕೆ ಹಾಜರಾಗಿರುವವರಿಗೂ ಎನ್ಪಿಎಸ್ ಕೊಡಲಾಗಿದೆ. ಅದನ್ನು ಎನ್ಪಿಎಸ್ಗೆ ಪರಿಗಣಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನೇಮಕಾತಿ ಪತ್ರ 2006 ಕ್ಕಿಂತ ಮೊದಲಿದ್ದರೆ ಅದನ್ನು ಪರಿಗಣಿಸಿಯೇ ಅವರಿಗೆಲ್ಲಾ ಒಪಿಎಸ್ ಪಿಂಚಣಿಗೆ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯಿಂದ ಆಡಳಿತ ಮಂಡಳಿಗಳು ತನ್ನ ಪಾಲಿನ ಮೊತ್ತವನ್ನು ಪಿಂಚಣಿಗೆ ನೀಡಲು ನಿರ್ದೇಶಕ ಕೊಡಲಾಗುತ್ತದೆ. ಅನುದಾನಿತ ಕಾಲೇಜುಗಳಿಗೆ ಎನ್ಪಿಎಸ್ ಕೊಡುವ ಬೇಡಿಕೆಯನ್ನು ನ್ಯಾಯ ಸಮ್ಮತವಾಗಿ ಪರಿಗಣನೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಮಾರ್ಚ್ 1ರಿಂದ ಬಿಬಿಎಂಪಿ ಅಧಿಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ: ಅಮೃತ್ ರಾಜ್
ಇನ್ನೊಂದೆಡೆ ನ್ಯಾಯಾಯುತ ಬೇಡಿಕೆಗಳಾದ ವೇತನ-ಭತ್ಯೆಗೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಹಾಗೂ ಅಧಿಕಾರಿ ಮತ್ತು ನೌಕರರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಚಿಕಿತ್ಸೆ ಪಡೆಯಲು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮನವಿ ಮಾಡಿಕೊಂಡಿದ್ದಾರೆ.
ಫೆಬ್ರವರಿ 21 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯ ನಿರ್ಣಯದಂತೆ ಎಲ್ಲಾ ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಒಮ್ಮತ ತೀರ್ಮಾನದಂತೆ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಮಾರ್ಚ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಲಾಗುವುದು ಎಂದು ಅಮೃತ್ ರಾಜ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರು, ಸರ್ಕಾರದ ಅಧೀನಕ್ಕೊಳಪಡುವ ನೌಕರರು ದಿನಾಂಕ 2022 ರ ಜುಲೈ 1 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೆ ಪಡೆದು, ಚುನಾವಣೆ ನೀತಿ ಸಂಹಿತೆಗಿಂತ ಮೊದಲು ಶೇ.40 ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸಹ ಅವರು ಒತ್ತಾಯ ಮಾಡಿದ್ದಾರೆ.