ಬೆಂಗಳೂರು: ಕಠಿಣ ನಿಯಮ ಜಾರಿ ನಡುವೆಯೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಹೊರತುಪಡಿಸಿ ಇತರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸುತ್ತಿದ್ದಾರೆ.
ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಿಂದ ಸಿಎಂ ವರ್ಚುವಲ್ ಸಭೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯವರ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರ ನಿವಾಸದಿಂದಲೇ ಆರೋಗ್ಯ ಸಚಿವ ಸುಧಾಕರ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ತಜ್ಞರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗಿಯಾಗಿದ್ದಾರೆ.
ಸಭೆಯಲ್ಲಿ ವಾರಾಂತ್ಯದ ನಿಷೇಧಾಜ್ಞೆ, ರಾತ್ರಿ ನಿಷೇಧಾಜ್ಞೆ, ಶೇ.50ರ ನಿರ್ಬಂಧ ಸೇರಿ ಕಠಿಣ ನಿಯಮ ಜಾರಿ ನಂತರದ ಸ್ಥಿತಿಗತಿಗಳ ಅವಲೋಕನ ಮಾಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಹೊರತುಪಡಿಸಿ ಏನೆಲ್ಲಾ ಕ್ರಮ ಕೈಗೊಳ್ಳಬಹುದಾಗಿದೆ ಎನ್ನುವ ಕುರಿತು ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳು, ಶಿಕ್ಷಕ ಸಮುದಾಯದಲ್ಲಿ ಸೋಂಕು ಹೆಚ್ಚುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಶಾಲೆ, ಕಾಲೇಜು ಮುಚ್ಚಲಾಗಿದೆ. ಅದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕುರಿತು ಕೂಡ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಣೆ