ಬೆಂಗಳೂರು: ಕೊರೊನಾ ಬಿಕ್ಕಟ್ಟು ನಂತರ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ, ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ವಿಚಾರಣಾ ಹಂತ ಹಾಗೂ ಪೊಲೀಸ್ ಇಲಾಖೆಯ ಮೂಲಸೌರ್ಕಯಗಳ ಬಗ್ಗೆ ಪರಾಮರ್ಶೆಯನ್ನು ಸಿಎಂ ನಡೆಸಿದರು.
ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲು ಸಾಧ್ಯವಾಗಿಲ್ಲ. ರಾಜ್ಯ ಪೊಲೀಸ್ ದಕ್ಷತೆ ಪರಂಪರೆ ಮುಂದುವರೆಯಬೇಕು. ದಿನೇ ದಿನೇ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ನಿಯಂತ್ರಣದ ಜೊತೆಗೆ ಹೊಸ-ಹೊಸ ರೀತಿಯ ಸೈಬರ್ ಕ್ರೈಂ, ಡ್ರಗ್ಸ್ ಮಾಫಿಯಾ ನಿಯಂತ್ರಣ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿರುವ ಬಗ್ಗೆ ತಿಳಿಸಿದರು.
ಸಮಸ್ಯೆಗಳಿಗೆ ಸ್ಪಂದನೆ:
ಪೊಲೀಸ್ ಠಾಣಾ ಮಟ್ಟದಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕು. ಜನರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಬೇಕು. ಅದೇ ರೀತಿ ಪೊಲೀಸರ ನಡವಳಿಕೆ ಉತ್ತಮವಾಗಿರಬೇಕು. ಅಪರಾಧ ಪ್ರಕರಣಗಳ ಸಂಪೂರ್ಣ ಮಾಹಿತಿ ರಿಪೋರ್ಟಿಂಗ್ ಸಿಸ್ಟಂ ಇನ್ನಷ್ಟು ಉತ್ತಮವಾಗಿರಬೇಕು. ಪ್ರತಿಯೊಂದು ಅಪರಾಧ ಪ್ರಕರಣ ತಿಳಿದುಕೊಳ್ಳುವ ಹಾಗೆ ಡಿಜಿ ಎಲ್ಲಾ ಎಸ್ಪಿಗಳಿಗೆ ಡ್ಯಾಶ್ ಬೋರ್ಡ್ ಹೊಂದಿರಬೇಕು ಎಂದು ಸೂಚಿಸಿದರು.
ಯಾವುದೇ ರಾಜಿ ಇಲ್ಲ:
ಅಪರಾಧ ಪ್ರಕರಣ ಪತ್ತೆ ಜೊತೆ-ಜೊತೆಗೆ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಕಾಲ-ಕಾಲಕ್ಕೆ ನಿರಂತರವಾಗಿ ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಗಳ ಗಮನಿಸುತ್ತಿರಬೇಕು. ಮುಂದಿನ ತನಿಖೆಯಲ್ಲಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು. ಇದರಲ್ಲಿ ಯಾವುದೇ ರಾಜಿ ಸಂಧಾನ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ಹೇಳಿದ್ರು.
ಖಾಕಿಗೆ ತಾಕೀತು:
ಬೆಂಗಳೂರಿನಲ್ಲಿ ನಡೆಯುವ ಭೂ ವಿವಾದ ಹಾಗೂ ಸಿವಿಲ್ ಪ್ರಕರಣಗಳಲ್ಲಿ ಕೈ ಹಾಕಬಾರದು. ಗ್ಲಾಬ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಜಿಲ್ಲೆಯ ನದಿ ಪಾತ್ರಗಳಲ್ಲಿ ಮರಳು ಮಾಫಿಯಾ ದಂಧೆಕೋರರ ಜೊತೆ ಕೈ ಜೋಡಿಸಬಾರದು ಎಂದು ತಾಕೀತು ಮಾಡಿದರು.
ಅಗತ್ಯ ಕ್ರಮಕ್ಕೆ ಆದೇಶ:
ಪೊಲೀಸ್ ಸುಧಾರಣೆಗಾಗಿ ಕಮಾಂಡ್ ಸೆಂಟರ್ ನಿರ್ಮಾಣವಾಗುತ್ತಿದೆ. 6 ವಿಧಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ. ಜೈಲುಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗ್ನಿಶಾಮಕ ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ಓದಿ: ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್ನಿಂದ ಭರ್ಜರಿ ಟಕ್ಕರ್!