ಬೆಂಗಳೂರು: ವಿಶ್ವ ಹೃದಯ ದಿನದ ನಿಮಿತ್ತ ಇಂದು ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ಕಬ್ಬನ್ ಪಾರ್ಕ್ ಮೂಲಕ ಕಂಠೀರವ ಸ್ಟೇಡಿಯಂದವರಿಗೆ ಬಿರುಸಿನ ನಡಿಗೆ(ವಾಕಥಾನ್) ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು.
ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವ ಹೃದಯ ದಿನಾಚರಣೆ ನಿಮಿತ್ತ ಹೃದಯ ಸ್ನೇಹಿ ಚಟುವಟಿಕೆಯಾದ ಬಿರುಸಿನ ನಡಿಗೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಬಿರುಸಿನ ನಡಿಗೆ ಸಹಾಯಕ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೃದಯ ಮನುಷ್ಯನ ಅಂಗಗಳ ಪೈಕಿ ಅತ್ಯಂತ ಪ್ರಮುಖ ಅಂಗ. ಹೃದಯಾಘಾತ ಆದಾಗ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ಮಾಹಿತಿ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದರು.
ಅಕಾಲಿಕ ಮರಣಗಳಲ್ಲಿ ಶೇ 25 ರಷ್ಟು ಹೃದಯಾಘಾತದ್ದೇ ಪಾಲು
ಶೇ.60 ರಷ್ಟು ಸಂಭವಿಸುವ ಅಕಾಲಿಕ ಮರಣಗಳಲ್ಲಿ ಶೇ.25 ರಷ್ಟು ಸಾವುಗಳು ಹೃದಯರೋಗದಿಂದ ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಬಿರುಸಿನ ನಡಿಗೆ ಅತ್ಯುತ್ತಮ ವ್ಯಾಯಾಮವಾಗಿದೆ.
ಜನರು ನಿತ್ಯ ಶ್ರಮಜೀವನಕ್ಕೆ ಬದ್ಧರಾಗಿರಬೇಕು. ಕನಿಷ್ಠ ಅರ್ಧ ಗಂಟೆಯಾದರೂ ಬಿರುಸಿನ ನಡಿಗೆ ಮಾಡಬೇಕು ಎಂದು ಸಲಹೆ ನೀಡಿದರು. ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ನಡಿಗೆ ಸಹಕಾರಿ. ಹೀಗಾಗಿ ಇಂದಿನಿಂದ ನಾನು ನಿಯಮಿತ ವಾಕ್ ಮಾಡ್ತೀನಿ ಎಂದು ಪ್ರತಿಜ್ಞೆ ಮಾಡಿದರು.
ಬಿರುಸಿನ ನಡಿಗೆಗೆ ಸ್ಫೂರ್ತಿ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ನಿಯಮಿತವಾಗಿ ವಾಕಿಂಗ್ ಮಾಡುವ ಪ್ರತಿಜ್ಞೆಯನ್ನು ಮುಖ್ಯಮಂತ್ರಿಗಳು ಕೈಗೊಂಡರು. ವ್ಯಕ್ತಿ ಹಾಗೂ ಸಮುದಾಯದ ಆರೋಗ್ಯ ಬಹಳ ಮುಖ್ಯವಾಗಿದ್ದು, ಹೃದಯ ಸದಾ ಬಡಿಯುವ ಅಂಗ ಇದನ್ನು ಆರೋಗ್ಯಕರವಾಗಿಡುವ ಮೂಲಕ ಆರೋಗ್ಯವಂತ ರಾಜ್ಯವನ್ನು ಕಟ್ಟೋಣ ಎಂದು ತಿಳಿಸಿದರು.
ಎಲ್‌ಇಡಿ ವಾಹನಗಳು ಲೋಕಾರ್ಪಣೆ:
ಕೋವಿಡ್ ಜಾಗೃತಿಯ ಎಲ್‌ಇಡಿ ವಾಹನಗಳನ್ನು ಸಿಎಂ ಉದ್ಘಾಟಿಸಿದರು. ರಾಜ್ಯದ ಎಲ್ಲ ಹಳ್ಳಿಗಳಿಗೂ ಈ ವಾಹನಗಳು ತೆರಳಲಿದ್ದು, ಕೋವಿಡ್ ಹಾಗೂ ಲಸಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಜನರಿಗೆ ದೃಶ್ಯಗಳ ಮೂಲಕ ಮಾಹಿತಿ ನೀಡಲಿವೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಅನೇಕರು ಸಿಎಂಗೆ ಸಾಥ್ ನೀಡಿದರು.