ಬೆಂಗಳೂರು: ಬಿಬಿಎಂಪಿ ಚುನಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಚುನಾವಣೆ ಯಾವಾಗ ಬಂದರೂ ಸಚಿವರು ಯಶಸ್ವಿಯಾಗಿ ನಿಭಾಯಿಸಲು ಸೂಚಿಸಿದ್ದೇವೆ. ಬೆಂಗಳೂರಿನ ಸಚಿವರ ಜೊತೆ ಹೊರಗಿನ ಸಚಿವರನ್ನು ನಿಯೋಜಿಸಿ ಯಶಸ್ವಿಯಾಗಿ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಪುಟ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೋವಿಡ್ ನಿರ್ವಹಣೆ, ನಿಯಮ ಸಡಿಲಿಕೆ ಬಗ್ಗೆ ಬೇರೆ ಬೇರೆ ವಲಯದವರು ಮನವಿ ಮಾಡಿದ್ದಾರೆ. ಶಾಲೆ-ಕಾಲೇಜು ತೆರೆಯುವ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎಲ್ಲಾ ಸಚಿವರೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ತಜ್ಞರ ಸಮಿತಿಯಿಂದಲೂ ವರದಿ ಕೇಳಿದ್ದೇವೆ. ನಿಯಮ ಸಡಿಲಿಕೆ ಬಗ್ಗೆ ತಜ್ಞರ ವರದಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಎಲೆಕ್ಷನ್ ಯಾವಾಗ ಬಂದರೂ ಯಶಸ್ವಿಯಾಗಿ ನಿಭಾಯಿಸುತ್ತೇವೆ. ಬೆಂಗಳೂರಿನ ಸಚಿವರ ಜೊತೆಗೆ ಹೊರಗಿನ ಸಚಿವರನ್ನು ನಿಯೋಜಿಸಿ ಚುನಾವಣೆ ನಡೆಸುತ್ತೇವೆ. ಅದರಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಅಧಿಕಾರಕ್ಕೆ ಬಂದು ನಾಳೆಗೆ ಆರು ತಿಂಗಳೂ ತುಂಬುತ್ತಿದೆ. ನಾನು ಇಲ್ಲಿಯವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಇದೆ. ಅದರ ಜೊತೆಗೆ 2023ರವರೆಗೂ ಯಾವ ಯಾವ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಬೇಕು. ಆರು ತಿಂಗಳ ಕಾರ್ಯಕ್ರಮಗಳ ಬಗ್ಗೆ ಪ್ರಚಾರ, ಮುಂದಿನ ಒಂದು ವಾರ ಪ್ರತಿಯೊಂದು ಇಲಾಖೆಗಳ ಕುರಿತಂತೆ ಕೈಗೊಂಡ ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂದು ಸಿಎಂ ವಿವರಿಸಿದರು.
ಫೆ.14ರಿಂದ 25ರವೆಗೆ ಜಂಟಿ ಅಧಿವೇಶನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ ಎಂದರು.
ರೇಸ್ ಕೋರ್ಸ್ನಲ್ಲಿ ಟರ್ಫ್ ಕ್ಲಬ್ನಿಂದ ಡರ್ಬಿ ರೇಸ್ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಇದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತೇವೆ. ನಿಯಮಗಳ ಉಲ್ಲಂಘನೆ ಆಗಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ರವಿ ಡಿ ಚೆನ್ನಣ್ಣನವರ್ ಸೇರಿ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬಿಜೆಪಿ ಸಿದ್ಧತಾ ಸಭೆ ಬಗ್ಗೆ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿ, ಆರೋಪ ಮಾಡುವುದಕ್ಕೆ ಕಾಂಗ್ರೆಸ್ ಇರೋದು. ಅವರು ಅಧಿಕಾರದಲ್ಲಿ ಇದ್ದಾಗ ಏನೆಲ್ಲ ಮಾಡಿದ್ದಾರೆ ಅಂತ ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದರು.
ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವರಿಷ್ಠರ ಜೊತೆ ಮಾತನಾಡುತ್ತಿದ್ದೇನೆ. ಅವರು ಕರೆದರೆ ದೆಹಲಿಗೆ ಹೋಗ್ತೇನೆ. ಎಲ್ಲಾ ಸಂಸದರ ಜೊತೆ ಸಭೆ ನಡೆಸುವ ಬಗ್ಗೆ ಚಿಂತನೆ ಮಾಡ್ತೇನೆ ಎಂದು ತಿಳಿಸಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ