ಬೆಂಗಳೂರು: ಕೇಂದ್ರ ಸರ್ಕಾರದ ಮಟ್ಟದಲ್ಲಿ ಅನುಮೋದನೆಗೆ ಇರುವ ತೊಡಕುಗಳ ನಿವಾರಿಸಬೇಕು,ಅಂತರ ರಾಜ್ಯ ಜಲ ವಿವಾದಗಳ ಬಗ್ಗೆ ಮತ್ತೊಮ್ಮೆ ಗಮನಹರಿಸಬೇಕು, ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ತೀವ್ರಗತಿಯಲ್ಲಿ ಅನುಮೋದನೆ ಹಾಗೂ ಚಾಲನೆ ಕೊಡಲು ಎಲ್ಲ ರೀತಿಯ ನೆರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ವರ್ಚುವಲ್ ಮೂಲಕ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಅಂಶಗಳೂ ರಾಜ್ಯದಲ್ಲಿದ್ದು, ರಸ್ತೆ, ರೈಲ್ವೆ, ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 5 ವಿಮಾನ ನಿಲ್ದಾಣಗಳು, ಒಳನಾಡು ಜಲಸಾರಿಗೆ, ಕೆ- ರೈಡ್ ಮುಂತಾದ ವುಗಳನ್ನು ಹೊಂದಿದೆ. ರೈಲು ಉತ್ಪಾದನೆಯಯಲ್ಲಿ 50-50 ಪಾಲುದಾರಿಕೆಯನ್ನು ಹೊಂದಿದ ಮೊದಲ ರಾಜ್ಯ ನಮ್ಮದು ಎನ್ನುವುದನ್ನು ಉಲ್ಲೇಖಿಸುತ್ತಾ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಗಮನ ಸೆಳೆದರು, ಪರಿಸರ ಹಾಗೂ ಅರಣ್ಯ ಇಲಾಖೆ ಅನುಮೋದನೆಗಳು, ಆರ್ಥಿಕ ವಲಯದಲ್ಲಿ ಕೆಲವು ಕಾನೂನುಗಳನ್ನು ಸರಳೀಕರಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯ ಎಂದರು.
ಅಂತರ ರಾಜ್ಯ ಜಲ ವಿವಾದಗಳಿಂದ ನೀರಾವರಿ ಯೋಜನೆಗಳಲ್ಲಿ ವಿಳಂಬವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮಧ್ಯಸ್ಥಿಕೆಗಳ ಅಗತ್ಯವೂ ಇದ್ದು, ಇವುಗಳ ಬಗ್ಗೆ ಮತ್ತೊಮ್ಮೆ ಗಮನಹರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: 18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!
ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಹಾಗೂ ಬಂಡವಾಳ ಮೂಲಕ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದ್ದು, ಈ ಯೋಜನೆಗಳ ಶೀಘ್ರವಾಗಿ ಪೂರ್ಣಗೊಳಿಸಬೇಕಿದೆ. ಬೆಂಗಳೂರು-ಮೈಸೂರು-ಹೈದ್ರಾಬಾದ್ ಗೆ ಹೈ ಸ್ಪೀಡ್ ರೈಲು ಪ್ರಮುಖ ಯೋಜನೆಯಾಗಿದೆ. 453 ಕಿಮೀ.ಉದ್ದದ ಈ ಯೋಜನೆ ಯನ್ನು ಮೇಲ್ದರ್ಜೆ ಗೇರಿಸುವುದರಿಂದ ಎರಡೂ ರಾಜ್ಯಗಳ ನಡುವಿನ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯದಲ್ಲಿ 330 ಕಿಲೋಮೀಟರ್ ಕರಾವಳಿ ಇದೆ. ಅಲ್ಲಿ ಬಂದರುಗಳ ನಿರ್ಮಾಣ, ವಾಣಿಜ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದಕ್ಕಾಗಿ ಈಗಿರುವ ಸಿಆರ್ ಜೆಡ್ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆ. ಇಡೀ ದೇಶಕ್ಕೆ ಒಂದೇ ಸಿಆರ್ ಜೆಡ್ ಕಾನೂನು ತರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದರು.
ಕರ್ನಾಟಕದ ಅಭಿವೃದ್ಧಿಯಲ್ಲಿ ರಸ್ತೆ, ರೈಲು ಸಂಪರ್ಕ, ವಿಮಾನ ನಿಲ್ದಾಣ ಮತ್ತು ಬಂದರು ಮುಂತಾದ ಮೂಲಭೂತ ಸೌಕರ್ಯಗಳು ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿ ಬೆಂಗಳೂರು ಉಪನಗರ ಹಾಗೂ ತುಮಕೂರು ಚಿತ್ರದುರ್ಗ ದಾವಣಗೆರೆ ರೈಲ್ವೆ ಸಂಪರ್ಕಕ್ಕಾಗಿ ಕೇರೈಡ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ, ಬೆಂಗಳೂರು-ಚೆನ್ನೈ ಬೆಂಗಳೂರು-ಹೈದರಾಬಾದ್, ಬೆಂಗಳೂರು - ಮುಂಬೈ ನಡುವೆ ಮೇಗಾ ಮೂಲ ಸೌಕರ್ಯ ಕೈಗಾರಿಕೆ ಕಾರಿಡಾರ್ ಯೋಜನೆಗಳನ್ನು ಸ್ಥಾಪಿಸಲು 11 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್, ಕೃಷಿ -ತೋಟಗಾರಿಕೆ ಕ್ಲಸ್ಟರ್ ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಹಲವು ಯೋಜನೆಗಳ ಜಾರಿಗೆ ಕ್ರಮವಹಿಸಲಾಗಿದೆ. 2274 ಕಿ ಮೀ ರಾಜ್ಯ ಹೆದ್ದಾರಿ ಹಾಗೂ 3611 ಕಿ ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ 1100 ಕಿ ಮೀ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.ದಕ್ಷಿಣ ಭಾರತದ ಮೆಟ್ರೋ ನಗರಗಳನಡುವೆ ಹೈ ಸ್ಪೀಡ್ ರೈಲು ಲೈನ್ ನಿರ್ಮಾಣಕ್ಕೆ ಇಂಡಿಯನ್ ರೈಲ್ವೆ ಉದ್ದೇಶಿಸಿದೆ. ಚೆನೈ- ಬೆಂಗಳೂರು - ಮೈಸೂರು, ಹೈದರಾಬಾದ್ - ಬೆಂಗಳೂರು ಮಧ್ಯೆ ಯೋಜನೆ ಜಾರಿಯಾಗಲಿದೆ ಎಂದರು.ಉಡಾನ್ ಯೋಜನೆಯಡಿ ಶಿವಮೊಗ್ಗ, ಬಳ್ಳಾರಿ, ವಿಜಯಪುರ, ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಹೆಲಿ ಟೂರಿಸಂ ಗಾಗಿ ಚಿಕ್ಕಮಗಳೂರು, ಮಡಿಕೇರಿ, ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಬೆಲೆಕೆರೆಯಲ್ಲಿ ಎರಡು ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸಾಗರಮಾಲಾ ಯೋಜನೆಯಡಿ ಪವಿನಕುರ್ವೆ, ಕಾರವಾರ ಮತ್ತು ಹಳೆ ಮಂಗಳೂರು ಪೋರ್ಟ್ ಗಳ ಆಧುನಿಕರಣ ಯೋಜನೆ ಸಿದ್ಧಗೊಂಡಿದೆ ಎಂದು ಕೇಂದ್ರಕ್ಕೆ ವಿವರ ಒದಗಿಸಿದರು.
ರಾಜ್ಯದ 28 ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ಯಾಸ್ ಗ್ರಿಡ್ ಯೋಜನೆಯಡಿ 1204 ಕಿ ಮೀ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುತ್ತದೆ, ಹಾಗಾಗಿ ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ತೀವ್ರಗತಿಯಲ್ಲಿ ಅನುಮೋದನೆ ಹಾಗೂ ಚಾಲನೆ ಕೊಡಲು ಮತ್ತು ಎಲ್ಲ ರೀತಿಯ ನೆರವನ್ನು ನೀಡುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಕೋರುತ್ತಾ, ಕರ್ನಾಟಕ ರಾಜ್ಯ ಈ ಗತಿಶಕ್ತಿಯ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿದ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.