ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದ ಸಂಪೂರ್ಣ ತನಿಖೆ ಆಗಿಲ್ಲ. ಚಾರ್ಜ್ ಶೀಟ್ ಕೂಡ ಹಾಕಿಲ್ಲ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ನವರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ಬಿಟ್ ಕಾಯಿನ್ ವಿಚಾರ ತನಿಖೆ ನಡೆಯುತ್ತಿದೆ. ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. ಯಾವುದೇ ವಿಚಾರ ಮಾತಾಡೋದಾದ್ರೆ ಸ್ಪಷ್ಟ ಮಾಹಿತಿ ಇರಬೇಕು. ನಾನು ಯಾವ ಹೇಳಿಕೆಯನ್ನೂ ಗಮನಿಸಿಲ್ಲ. ಮಾಹಿತಿ ಇದ್ರೆ ಅವರು ಏನು ಬೇಕಾದ್ರೂ ಹೇಳಬಹುದು. ಆದ್ರೆ ಸ್ಪಷ್ಟವಾದ ಮಾಹಿತಿ ಇರಬೇಕು ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಕೋವಿಡ್ ಹಗರಣವನ್ನು ತನಿಖೆ ಮಾಡ್ತಿವಿ ಅಂತ ಹೇಳಿತ್ತು. ಅದರ ಪ್ರಕಾರ ಈಗ ತನಿಖೆ ಆಗ್ತಿದೆ ಅಷ್ಟೇ. ನಮಗೆ ಇಲ್ಲಿ ರಾಜಕೀಯ ಉದ್ದೇಶ ಇಲ್ಲ. ನಿವೃತ್ತ ನ್ಯಾಯಮೂರ್ತಿ ಡಿ. ಕುನ್ಹಾ ಅವರಿಗೆ ಕೋವಿಡ್ ಹಗರಣದ ತನಿಖೆಗೆ ವಹಿಸಿತ್ತು. ಭ್ರಷ್ಟಾಚಾರ ನಡೆದಿದೆ ಎಂದು ಕುನ್ಹಾ ಅವರು ವರದಿಯಲ್ಲಿ ಹೇಳಿದ್ದಾರೆ ಎಂದರು.
14-15 ಸಾವಿರ ಕೋಟಿ ರೂ. ನಷ್ಟ ಆಗಿದೆ : ಕಿಟ್, ವ್ಯಾಕ್ಸಿನ್, ಔಷದಿ, ಇಕ್ಯೂಪ್ಮ್ಮೆಂಟ್ ಖರೀದಿ ಒಂದೊಂದನ್ನು ಬೇರೆ ಬೇರೆಯಾಗಿ ನೋಡಿದ್ದಾರೆ. ಅದರಲ್ಲಿ ಕಿಟ್ಸ್ ಖರೀದಿ ಮಾಡಿದ್ದು, ನಮಲ್ಲಿ 300-400 ರೂ.ಗೆ ಸಿಗ್ತಿರೋದನ್ನು ಚೀನಾದಿಂದ 2500-3000 ರೂ. ಕೊಟ್ಟು ತಂದಿದ್ದಾರೆ. ಇದರಿಂದ 14-15 ಸಾವಿರ ಕೋಟಿ ರೂ. ನಷ್ಟ ಆಗಿದೆ. ಮುಂದಿನ ಕ್ರಮವನ್ನು ಸರ್ಕಾರ ಮಾಡುತ್ತೆ. ಕ್ಯಾಬಿನೆಟ್ನಲ್ಲಿ ಮುಂದೆ ವಿವರವಾಗಿ ತಿಳಿಸಿ, ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಚುನಾವಣೆ ಬಂದಾಗ ಇಶ್ಯುಸ್ ಮೇಲೆ ರಾಜಕೀಯ ಆಗುತ್ತೆ. ಆದ್ರೆ ಈಗ ವೈಯಕ್ತಿಕವಾಗಿ ನಿಂದನೆ ಮಾಡೋದು ಜಾಸ್ತಿ ಆಗಿದೆ. ಜನರೂ ಸಹ ಅದೇ ಮಾತನಾಡೋದು ಆಗಿದೆ. ಹಿಂದೆ ನಾವು ಕೋವಿಡ್ ಹಗರಣ ತನಿಖೆ ಮಾಡಿಸ್ತೇವೆ ಅಂದಿದ್ವಿ. ಅದಕ್ಕೆ ತನಿಖೆ ಮಾಡಿಸ್ತಾ ಇದ್ದೇವೆ. ಅದಕ್ಕೆ ಅವರು ದ್ವೇಷ ರಾಜಕೀಯ ಮಾಡ್ತಿದ್ದಾರೆ ಅಂದ್ರೆ ಹೇಗೆ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಕಾನೂನು ಬಾಹಿರ ಆಗಲ್ವಾ? : ತೇಜಸ್ವಿ ಸೂರ್ಯ ಹಿಂದಿನ ಎರಡು ವರ್ಷದ ಹಳೆಯ ಘಟನೆ ಬಗ್ಗೆ ಟ್ವೀಟ್ ಮಾಡಿದ್ರು. ಅದು ಗೊತ್ತಾದ ಮೇಲೆ ಎಫ್ಐಆರ್ ಮಾಡಲಾಗಿದೆ. ಈಗಿನ ಭೂಮಿಯನ್ನು ವಕ್ಫ್ಗೆ ತೆಗೆದುಕೊಂಡಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾರೆ. ಅದು ಕಾನೂನು ಬಾಹಿರ ಆಗಲ್ವಾ?. ಅವರ ವಿರುದ್ಧ ಕ್ರಮ ತೆಗೆದುಕೊಂಡ್ರೆ ಅದನ್ನು ರಾಜಕೀಯ ಮಾಡ್ತಾರೆ ಅಂತಾರೆ. ಸರ್ಕಾರ ಕೆಲಸ ಮಾಡಬೇಕು ಅಲ್ವಾ?. ಜನ ನಮ್ಮನ್ನ ನೋಡ್ತಾರೆ. ಸರ್ಕಾರದ ಬಳಿ ಏನು ಮಾಹಿತಿ ಇದೆ, ಅದರ ಪ್ರಕಾರ ಆಗುತ್ತೆ ಎಂದು ಗೃಹ ಸಚಿವರು ಸಮರ್ಥಿಸಿಕೊಂಡರು.
ಮೂರು ಕ್ಷೇತ್ರಗಳಲ್ಲಿ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ಜನರ ಮನಸ್ಸು ಏನಿದೆ ನೋಡಬೇಕು. ಕೊನೆವರೆಗೆ ಏನು ಆಗುತ್ತೆ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ಮೂರುವರೆ ವರ್ಷ ನಾನೇ ಸಿಎಂ ಅಂದಿದ್ದಾರೆ : ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನು ನಿನ್ನೆಯೇ ಸಿಎಂ ಕ್ಲಾರಿಫೈ ಮಾಡಿದ್ದಾರೆ. ಮೂರುವರೆ ವರ್ಷ ನಾನೇ ಸಿಎಂ ಅಂದಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ಅವರು ದೇಶದ ಪ್ರಧಾನಿ. ಅವರ ಬಗ್ಗೆ ನಾವು ಎಚ್ಚರದಿಂದಿರಬೇಕು. ಅವರು ಕೂಡ ಹಾಗೆ ಎಚ್ಚರದಿಂದ ಮಾತನಾಡಬೇಕು. ಅಬಕಾರಿ ಇಲಾಖೆ ಭ್ರಷ್ಟಾಚಾರ ಅನ್ನೋದು ಸ್ಪಷ್ಟವಾಗಬೇಕು. ಭ್ರಷ್ಟಾಚಾರ ಆಗಿದೆ, ಆಪಾದನೆ ಮಾಡಿದ್ದಾರೆ ಅಂದ್ರೆ, ಅದೆಲ್ಲಾ ಸ್ಪಷ್ಟವಾಗಿ ಗೊತ್ತಾಗಬೇಕು ಎಂದು ಹೇಳಿದರು.
ಇದನ್ನೂ ಓದಿ : ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 - 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ: ಸಿಎಂ ಸಿದ್ದರಾಮಯ್ಯ