ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ತಕ್ಷಣವೇ ಎರಡು ತಿಂಗಳ ವೇತನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
4 ನಿಗಮಗಳ ಅಧ್ಯಕ್ಷರ ಜೊತೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಕೆಎಸ್ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನಿಗಮದ ಸಿಬ್ಬಂದಿಗೆ ವೇತನ ಪಾವತಿ ಮಾಡದ ಸ್ಥಿತಿ ಎದುರಿಸುತ್ತಿರುವ ಕುರಿತು ಮನವರಿಕೆ ಮಾಡಿಕೊಟ್ಟರು. ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಕ್ಷಣವೇ ಎರಡು ತಿಂಗಳ ವೇತನ ಬಿಡುಗಡೆ ಮಾಡಲು ಸಮ್ಮತಿ ನೀಡಿದರು. ಈ ಸಂಬಂಧ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಕುರಿತಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. 4 ನಿಗಮಗಳ ಅಧ್ಯಕ್ಷರ ಜೊತೆಯಲ್ಲಿ ಚರ್ಚೆ ನಡೆಸಿ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. 634 ಕೋಟಿ ರೂ.ಗಳನ್ನು ಕೊಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಪ್ಪಿಗೆ ನೀಡಿದ್ದು, ತಕ್ಷಣವೇ ಎರಡು ತಿಂಗಳ ವೇತನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಸೆಂಬರ್ ತಿಂಗಳ ವೇತನ ನಂತರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೂ ಸದ್ಯ ಸಾರಿಗೆ ನಿಗಮಗಳು ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪ ಮಾಡಿಲ್ಲ. ಇಂದು ಟಿಕೆಟ್ ದರ ಹೆಚ್ಚಳ ಸಂಬಂಧ ಯಾವುದೇ ಚರ್ಚೆಯಾಗಿಲ್ಲ. ಟಿಕೆಟ್ ದರ ಹೆಚ್ಚಳದ ಪ್ರಸ್ತಾಪವು ಸದ್ಯಕ್ಕೆ ನಮ್ಮ ಮುಂದಿಲ್ಲ ಎಂದು ಡಿಸಿಎಂ ಸವದಿ ತಿಳಿಸಿದರು.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಾವು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿದ್ದೇವೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮುದಾಯ ಆಧಾರಿತವಾಗಿ ಮಾಡಲಾಗಿದ್ದು, ನಾವು ಅದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ನಮ್ಮ ಸಮುದಾಯದ ವಿಚಾರದಲ್ಲಿ ನಾವು ಒತ್ತಡ ಹಾಕಿದ್ದೇವೆ ಎಂದು ಸವದಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ. ವರಿಷ್ಠರ ಜೊತೆ ಅವರು ಸಂಪರ್ಕದಲ್ಲಿದ್ದು, ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.