ಬೆಂಗಳೂರು: ಕಿತ್ತೂರಿನ ರಾಣಿ ಚೆನ್ನಮ್ಮನ ಅರಮನೆ ಮತ್ತು ಕೋಟೆಯನ್ನು 18.05 ಕೋಟಿ ರೂ.ಗಳ ವೆಚ್ಚದಲ್ಲಿ ಸಂರಕ್ಷಣೆ ಹಾಗೂ ಪುನರ್ ಸ್ಥಾಪನೆ ಹಾಗೂ ವಸ್ತು ಸಂಗ್ರಹಾಲಯದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 27. 51 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 4ನೇ ಸಭೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಕೋಟೆ ಅತ್ಯಂತ ಶಿಥಿಲವಾಗಿದೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪುನರ್ ಸ್ಥಾಪನೆ ಮತ್ತು ಜೀರ್ಣೋದ್ಧಾರ ಕಾರ್ಯ ಆಗಬೇಕಿದೆ. ಕೋಟೆಯ ಒಳಭಾಗದ ಜೀರ್ಣೋದ್ಧಾರ ಸರಿಯಾಗಿ ಮಾಡಬೇಕು ಹಾಗೂ ಕೋಟೆಯ ಸುತ್ತ ಸ್ವಚ್ಛ ಮಾಡಬೇಕು. ಇದರ ನಿರ್ವಹಣೆಗೆ ಅಂದಾಜು ಪಟ್ಟಿ ತಯಾರಿಸುವಂತೆ ಸಿಎಂ ಸೂಚಿಸಿದರು.
ವಸ್ತು ಸಂಗ್ರಹಾಲಯದಲ್ಲಿ ಕಿತ್ತೂರು ಸಂಸ್ಥಾನದ ಸಂಪೂರ್ಣ ಕಥೆಯನ್ನು ಹೇಳುವಂತೆ ಅಭಿವೃದ್ಧಿಗೊಳಿಸಬೇಕು. ಪ್ರತಿ ಪಾತ್ರಕ್ಕೂ ಸಮಾನ ಮಹತ್ವ ನೀಡಬೇಕು. ಕಿತ್ತೂರು ಅರಮನೆಯ ದರ್ಬಾರಿನ ಪ್ರತಿರೂಪ ನಿರ್ಮಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಅಮ್ಮಿನಭಾವಿ ಮಠಗಳ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಹಾಲೋಗ್ರಾಫಿಕ್ ಸ್ಟುಡಿಯೋ ನಿರ್ಮಾಣವನ್ನು ಮುಂದಿನ ಹಂತದಲ್ಲಿ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಯನ್ನು ಅನುಭವ ಮತ್ತು ಪರಿಣತಿ ಹೊಂದಿರುವ ಗುತ್ತಿಗೆದಾರರಿಂದ ಮಾಡಿಸುವಂತೆ ಮುಖ್ಯಮಂತ್ರಿಗಳು ಇದೇ ವೇಳೆ ಸಲಹೆ ನೀಡಿದ್ದಾರೆ.
ಓದಿ : ಗೃಹ ಸಚಿವನಾಗಿ ಹರ್ಷ ಕೊಲೆ ಆರೋಪಿಗಳಿಗೆ ಫೈರಿಂಗ್ ಮಾಡೋಕಾಗುತ್ತಾ? ಆರಗ ಜ್ಞಾನೇಂದ್ರ
ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿ ಆಗಸ್ಟ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಕೇಂದ್ರ ರಕ್ಷಣಾ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2022-23ನೇ ಸಾಲಿಗೆ 6 ನೇ ತರಗತಿಯಿಂದ ಶಾಲೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದ್ದು, ಪ್ರಸ್ತುತ 82 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಾಗಿದೆ. ಸೆಪ್ಟೆಂಬರ್ನಲ್ಲಿ ಶಾಲೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ವಸತಿ ಶಾಲೆಗೆ ಹುದ್ದೆಗಳ ಸೃಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ನೂ ಸಿದ್ಧಪಡಿಸಲಾಗಿದ್ದು, ಇದಕ್ಕೆ ಸರ್ಕಾರದ ಅನುಮೋದನೆ ದೊರೆತ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಮುಖ್ಯಮಂತ್ರಿ ತಿಳಿಸಿದರು.