ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದ್ದು, ಸಾವಿನ ಸಂಖ್ಯೆ ನಿಯಂತ್ರಿಸಲು ಸಹಕಾರ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ, ಆರೋಗ್ಯ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.
ಆರೋಗ್ಯ ಸೌಧದಲ್ಲಿರುವ ಕೋವಿಡ್ ವಾರ್ ರೂಂ ಹಾಗೂ ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ವಾರ್ ರೂಂಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದರು. ವಾರ್ ರೂಂ ಕಾರ್ಯವನ್ನು ಪರಿಶೀಲಿಸಿದರು.
ಈ ವೇಳೆ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಕೋವಿಡ್ ವಾರ್ ರೂಂನಲ್ಲಿ ಸಿಬ್ಬಂದಿ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಕೆಲಸ ಮಾಡುತ್ತಿದ್ದಾರೆ. ಬಹಳ ಶ್ರಮ ಹಾಕುತ್ತಿದ್ದಾರೆ. ಶಕ್ತಿಮೀರಿ ಕೋವಿಡ್ ತಡೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದರು.
ಕೋವಿಡ್ ಸ್ಥಿತಿಗತಿ ವಿಚಾರಿಸಿದ ಪಿಎಂ ಮೋದಿ : ಕೋವಿಡ್ ತಡೆಯುವ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ ಮಾತನಾಡಿದರು. ಕೋವಿಡ್ ಸ್ಥಿತಿಗತಿ ವಿಚಾರಣೆ ಮಾಡಿದರು. ಇವತ್ತಿಗೂ ನಮ್ಮಲ್ಲಿ ಮಹಾರಾಷ್ಟ್ರಕ್ಕಿಂತ ಸೋಂಕಿನ ಪ್ರಮಾಣ ಹೆಚ್ಚಿದೆ.
ಆದರೆ, ಸಾವಿನ ಸಂಖ್ಯೆ ಜಾಸ್ತಿ ಇರುವುದು ನಮಗೆ ಆತಂಕ ತಂದಿದೆ, ಇದನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ನೀವೂ ಸಹಕಾರ ಕೊಡುತ್ತಿದ್ದೀರಿ. ಇನ್ನು, ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿ ಕೋವಿಡ್ ತಡೆಯುವುದಕ್ಕೋಸ್ಕರ ನಿಮಗೆ ಬರುವ ಮಾಹಿತಿ ಬೇರೆಯವರುಗೆ ತಿಳಿಸಿ, ಕೊರೊನಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ವಿನಂತಿಸುವುದಾಗಿ ತಿಳಿಸಿದರು.
ಕೋವಿಡ್ ಸ್ಥಿತಿಗತಿ ವಿಚಾರ ವಾರ್ ರೂಂ : ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಬಿಬಿಎಂಪಿ ಪಶ್ಚಿಮ ವಾರ್ ರೂಂಗೆ ಭೇಟಿ ನೀಡಿದ್ದೇನೆ. ದೇಶದಲ್ಲೇ ಮಾದರಿ ರೀತಿಯಲ್ಲಿ ನಮ್ಮ ವಾರ್ ರೂಂಗಳು ಕೆಲಸ ಮಾಡುತ್ತಿದೆ. ಅಂಕಿ-ಅಂಶಗಳು ನಿಖರವಾಗಿರುತ್ತವೆ.
10 ದಿನ,20 ದಿನ, 30 ದಿನ ಚಿಕಿತ್ಸೆ ಪಡೆದ ರೋಗಿಗಳ ನಿಖರ ಮಾಹಿತಿ ದಾಖಲಾಗಿದೆ.ವೈದ್ಯರು ಹೇಳಿದರೂ ಕೂಡ ಕೆಲ ಸೋಂಕಿತರು ಗುಣಮುಖರಾಗಿಯೂ ಆಸ್ಪತ್ರೆಯಿಂದ ಹೊರಹೋಗಿಲ್ಲ, 30 ದಿನಗಳ ಕಾಲ ಚಿಕಿತ್ಸೆ ಪಡೆದರೂ ಮುನ್ನೂರಕ್ಕೂ ಹೆಚ್ಚು ರೋಗಿಗಳು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.
ಅವರು ಮನೆಗಳಿಗೆ ಹೋಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಗಂಭೀರಸ್ವರೂಪದ ಸೋಂಕಿತರಿಗೆ ಚಿಕಿತ್ಸೆ ಪಡೆಯಲು ಅವಕಾಶ ಕೈ ತಪ್ಪಲಿದೆ ಹಾಗಾಗಿ ಸ್ಪಷ್ಟ ಸೂಚನೆ ಕೊಟ್ಟು 20 ದಿನ 30 ದಿನ ಇರುವವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಅಲ್ಲಿಗೆ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರನ್ನು ದಾಖಲು ಮಾಡಲು ಸೂಚನೆ ಕೊಡಲಾಗುತ್ತದೆ ಎಂದರು.
ಬಹಳ ವ್ಯವಸ್ಥಿತವಾಗಿ ವಾರ್ ರೂಂ ನಿಯಂತ್ರಣ ಮಾಡಲಾಗುತ್ತಿದೆ. ಇಡೀ ದೇಶದಲ್ಲಿಯೇ ವ್ಯವಸ್ಥಿತವಾಗಿ ವಾರ್ ರೂಂ ಬೇರೆಲ್ಲೂ ಕಾಣುವುದಿಲ್ಲ ನಮ್ಮ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ವ್ಯವಸ್ಥಿತ ರೀತಿಯಲ್ಲಿ ವಾರ್ ರೂಂಗಳು ಕೆಲಸ ಮಾಡುತ್ತಿದೆ. ಕೆಲಸ ಮಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಕ್ಕೆ ಏನು ಸುಧಾರಣೆ ಬೇಕೆಂದು ಹೇಳಿದರೆ ಅವುಗಳನ್ನು ಮಾಡಲು ಸಿದ್ಧ ಎಂದರು.
ಈಗ ಎರಡನೇ ಡೋಸೇಜ್ ಕೊಡಲು ಪ್ರಾರಂಭ ಮಾಡಿದ್ದೇವೆ ಯಾವುದೇ ಅಡ್ಡಿ ಆತಂಕ ಇಲ್ಲ. ಯಾರೂ ಕೂಡ ಆತಂಕಕ್ಕೆ ಒಳಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಹಂತ-ಹಂತವಾಗಿ ನಮಗೆ ವ್ಯಾಕ್ಸಿನ್ ಬರಲಿದೆ, ವ್ಯಾಕ್ಸಿನ್ ಬಂದಂತೆ ಅದಕ್ಕೆ ತಕ್ಕಂತೆ ಕೊಡಲಾಗುತ್ತದೆ. ಹಾಗಾಗಿ, ಯಾರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಿಎಂ ಮನವಿ ಮಾಡಿದರು.
ಬೆಳಗಾವಿ ಸುವರ್ಣ ಸೌಧದಲ್ಲೂ ಕೋವಿಡ್ ಕೇರ್ ಸೆಂಟರ್?: ಬೆಳಗಾವಿ ಸುವರ್ಣಸೌಧವನ್ನು ಕೋವಿಡ್ ಕೇರ್ ಸೆಂಟರ್ ಮಾಡುವ ಬಗ್ಗೆ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಸದ್ಯ ಹೋಟೆಲ್ ಇತರ ಕಟ್ಟಡಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದೆ. ಮುಂದೆ ಅನಿವಾರ್ಯವಾದಲ್ಲಿ ಆ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇಂದು ನನ್ನನ್ನು ಭೇಟಿ ಮಾಡಿದ್ದರು. ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಸಮಾಲೋಚನೆ ನಡೆಸಿದರು. ದೆಹಲಿಯಿಂದ ಅಗತ್ಯ ಸಹಕಾರ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ. ನಮಗೆ ಬೇಕಿರುವ ಎಲ್ಲಾ ಅನುಕೂಲತೆಗಳು ಕೇಂದ್ರದಿಂದ ಆಗುತ್ತಿದೆ.
ನಮಗೆ ಇವತ್ತು 120 ಆಕ್ಸಿಜನ್ ಕಂಟೈನರ್ ಜಮ್ ಶೆಡ್ ಪುರದಿಂದ ಇಂದ ಬಂದಿದೆ ನಮಗೆ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಈ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.