ಬೆಂಗಳೂರು: ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಸಾಕು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಬೇರೆ ಮಾರ್ಗಗಳ ಬಗ್ಗೆ ಆಲೋಚಿಸಿ ಎಂದು ವಲಯ ಉಸ್ತುವಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬೆಂಗಳೂರು ಲಾಕ್ ಡೌನ್ ಕುರಿತ ಸ್ಥಿತಿಗತಿ ಚರ್ಚೆ ವೇಳೆ ಬಹುತೇಕ ಸಚಿವರು ಲಾಕ್ ಡೌನ್ ವಿಸ್ತರಣೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಒಂದು ವಾರದ ಲಾಕ್ ಡೌನ್ ನಿಂದ ಕೊರೊನಾ ಹಬ್ಬುವಿಕೆ ನಿಯಂತ್ರಣ ಕಷ್ಟ, ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಅಗತ್ಯವಿದೆ ಎಂದರು. ಇದಕ್ಕೆ ಮತ್ತೆ ಕೆಲ ಸಚಿವರು ದನಿಗೂಡಿಸಿದರು.
ಕೊರೊನಾ ಕೇಸ್ ಗಳ ಸಂಖ್ಯೆ ಲಾಕ್ ಡೌನ್ ನಂತರದ ದಿನಗಳಲ್ಲಿಯೂ ಹೆಚ್ಚಾಗುತ್ತಲೇ ಇದೆ, ಲಾಕ್ ಡೌನ್ ಮುಗಿಯುವ ವೇಳೆಗೆ ಸಂಖ್ಯೆಯಲ್ಲಿ ಕಡಿಮೆಯಾಗಬಹುದು. ಆಗ ಲಾಕ್ ಡೌನ್ ತೆರವುಗೊಳಿಸಿದರೆ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹಾಗಾಗಿ ಲಾಕ್ ಡೌನ್ ಮತ್ತೊಂದು ವಾರ ವಿಸ್ತರಣೆ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಹುತೇಕರಿಂದ ಲಾಕ್ ಡೌನ್ ವಿಸ್ತರಣೆ ಬಗ್ಗೆ ಪದೇ ಪದೆ ಕೇಳಿಬಂದ ಅಭಿಪ್ರಾಯಕ್ಕೆ ಸಿಎಂ ಅಸಮಧಾನ ವ್ಯಕ್ತಪಡಿಸಿದರು. ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾತುಗಳು ಸಾಕು. ಈ ಬಗ್ಗೆ ಮುಂದೆ ನೋಡೋಣ, ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬೇರೆ ಮಾರ್ಗಗಳ ಬಗ್ಗೆ ಆಲೋಚನೆ ಮಾಡಿ ಎಂದು ಸಲಹೆ ನೀಡಿದರು.
ಸೀಲ್ ಡೌನ್ ಪ್ರದೇಶಗಳಲ್ಲಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಿ, ಲಾಕ್ ಡೌನ್ ಅನ್ನು ಕಠಿಣವಾಗಿ ಜಾರಿಗೊಳಿಸಿ, ಕೊರೊನಾ ನಿಯಂತ್ರಣಕ್ಕೆ ಏನೇನು ಅಗತ್ಯವಿದೆಯೋ ಅದೆಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.