ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಸಿಎಲ್ಪಿ ಸಭೆ ಮುಕ್ತಾಯಗೊಂಡಿದೆ. ಈ ಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲಾಯಿತು.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವರಾದ ತುಕಾರಾಂ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ, ಅಜಯ್ ಸಿಂಗ್, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರಿಜ್ವಾನ್ ಅರ್ಷದ್ ಸೇರಿ ಶಾಸಕರು, ಎಂಎಲ್ಸಿಗಳು ಭಾಗಿಯಾಗಿದ್ದರು.
ಇದನ್ನು ಓದಿ: ಕಾಂಗ್ರೆಸ್ಗೆ ತಿರುಗೇಟು ನೀಡಲು ಬಿಜೆಪಿ ಸಖ್ಯಕ್ಕೆ ಮುಂದಾದರೆ ಮಾಜಿ ಸಿಎಂ ಕುಮಾರಸ್ವಾಮಿ?
ವಿಧಾನ ಮಂಡಲ ಚಳಿಗಾಲದ ಅಧಿವೇಶನ ಇಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆ ಇಂದಿನ ಹೋರಾಟ ಹಾಗೂ ಮುಂದೆ ಸದನದ ಹೊರಗೆ ನಡೆಸಬಹುದಾದ ಹೋರಾಟಗಳ ವಿಚಾರವಾಗಿ ಚರ್ಚೆ ನಡೆಯಿತು.
ಕಾಂಗ್ರೆಸ್ ಶಾಸಕರು ವಿಧಾನಸಭೆ ಕಲಾಪ ಬಹಿಷ್ಕಾರ ಮಾಡಿರುವ ಹಿನ್ನೆಲೆ ಸಂಧಾನಕ್ಕೆ ಸ್ಪೀಕರ್ ಕಚೇರಿಯಿಂದ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಆಗಮಿಸಿ ಮನವಿ ಮಾಡಿದರು. ಶಾಸಕಾಂಗ ಸಭೆ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿ ಅವರು ಮನವಿ ಮಾಡಿಕೊಂಡಿದ್ದಾರೆ. ಸಂಧಾನಕ್ಕೆ ಬರುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಿದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಸಿಎಲ್ಪಿ ಸಭೆ ನಂತರ ಬರುವುದಾಗಿ ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಭರವಸೆ ಪಡೆದು ವಿಶಾಲಾಕ್ಷಿ ತೆರಳಿದ್ದಾರೆ.
ಇನ್ನು ಈಗಾಗಲೇ ಸಿದ್ದರಾಮಯ್ಯ ಕಲಾಪ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ. ವಿಧಾನಸಭೆ ಕಲಾಪ ಈಗಾಗಲೇ ಆರಂಭವಾಗಿದ್ದು ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ಸದಸ್ಯರು ಕಲಾಪಕ್ಕೆ ತೆರಳಿಲ್ಲ. ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಳಿತು ಚರ್ಚೆ ಮುಂದುವರಿಸಿದ್ದಾರೆ. ಆದರೆ ವಿಧಾನಪರಿಷತ್ ಸದಸ್ಯರು ಕಲಾಪಕ್ಕೆ ತೆರಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಭಾಗವಹಿಸಿದ ಪರಿಷತ್ ಸದಸ್ಯರು ಸಭೆಯಿಂದ ತೆರಳಿದ್ದು, ಕೇವಲ ವಿಧಾನ ಸಭೆ ಸದಸ್ಯರು ಮಾತ್ರ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಚರ್ಚೆ ಮುಂದುವರಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಶಾಸಕರ ತಂಡ ಸದನದಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವುದು ಇನ್ನೇನು ನಿರ್ಧಾರವಾಗಬೇಕಿದೆ.