ಬೆಂಗಳೂರು: ಬಾಂಗ್ಲಾ ವಲಸಿಗರೆಂಬ ಆರೋಪದಡಿ ನಗರದ ಕರಿಯಮ್ಮನ ಅಗ್ರಹಾರ, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು ಸುತ್ತಮುತ್ತಲಿನ ಶೆಡ್ ಗಳಲ್ಲಿ ವಾಸಿಸುತ್ತಿದ್ದ ಜನರನ್ನು ಬಲವಂತವಾಗಿ ತೆರವು ಮಾಡುತ್ತಿದ್ದ ಬಿಬಿಎಂಪಿ ಕಾರ್ಯಾಚರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಬಿಎಂಪಿ ಕಾರ್ಯಾಚರಣೆ ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎನ್ ಜಿ ಒ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಬಳಿಕ ಬಿಬಿಎಂಪಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತು.
ಬಿಬಿಎಂಪಿ ವಾರ್ಡ್ ನಂ. 151ರ ವ್ಯಾಪ್ತಿಯ ಪ್ರದೇಶಗಳಲ್ಲಿನ ಬಡ ಜನರನ್ನು ಏಕೆ ಅಲ್ಲಿಂದ ಖಾಲಿ ಮಾಡಿಸಲಾಗುತ್ತಿದೆ. ಯಾವ ಕಾನೂನಿನ ಅಡಿ ಮತ್ತು ಯಾವ ಅಧಿಕಾರ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಿತು.
ಬಿಬಿಎಂಪಿ ಕಾರ್ಯಾಚರಣೆ ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವ ಸಂಸ್ಥೆ, ಇಲ್ಲಿನ ಜನರು ಕಡು ಬಡವರಾಗಿದ್ದು, ಉತ್ತರ ಕರ್ನಾಟಕ ಭಾಗದ ರಾಯಚೂರು, ಹುಬ್ಬಳ್ಳಿ, ಧಾರವಾಡ ಮತ್ತು ಅಸ್ಸಾಂ, ಬಿಹಾರ, ತ್ರಿಪುರ ಮತ್ತಿತರ ಭಾಗಗಳಿಂದ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. aಕಳೆದ ಹತ್ತು ಹದಿನೈದು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಮನೆಗೆಲಸ, ಕೂಲಿ ಕಾರ್ಮಿಕರಾಗಿರುವ ಈ ಜನರನ್ನು ಅಕ್ರಮ ಬಾಂಗ್ಲಾ ವಲಸಿಗರೆಂಬ ಆರೋಪದಡಿ ಬಿಬಿಎಂಪಿ ಹಾಗೂ ಪೊಲೀಸರು ಜಂಟಿಯಾಗಿ ಖಾಲಿ ಮಾಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದುರ್ಬಲ ಕೂಲಿ ಕಾರ್ಮಿಕರ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈಗಾಗಲೇ ಕಾರ್ಯಾಚರಣೆಯಲ್ಲಿ ಶೆಡ್ ಅಥವಾ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರು.