ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ಅಂತರ್ಜಲವನ್ನು ಉಳಿಸಲು ಜಿಲ್ಲಾಡಳಿತ ಸೇರಿದಂತೆ ಇಲ್ಲಿನ ಸ್ಥಳೀಯರು ನೀಲಗಿರಿ ಮರಗಳನ್ನು ತೆರುವು ಮಾಡುತ್ತಿದ್ದಾರೆ.
ಬಯಲುಸೀಮೆ ಪ್ರದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹ ಒಂದು. ಇಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು, ಇದಕ್ಕೆ ಕಾರಣ ಹಲವು ಇವೆ. ಒಂದು ಕಡೆ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ, ಮತ್ತೊಂದೆಡೆ ವೇಗವಾಗಿ ಬೆಳೆಯುತ್ತಿರುವ ಕಾಂಕ್ರೀಟ್ ಕಟ್ಟಡಗಳು ಹಾಗೂ ಪ್ರಮುಖವಾಗಿ ಅಂತರ್ಜಲದ ನೀರನ್ನೇ ಹೀರಿಕೊಂಡು ಬೆಳೆಯುತ್ತಿರುವ ನೀಲಗಿರಿ ಮರಗಳು. ಇದೀಗ ನೀಲಗಿರಿ ಮರಗಳ ತೆರವು ಮಾಡಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಇದಕ್ಕೆ ರೈತರು ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಕೈ ಜೋಡಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ರಬ್ಬನಹಳ್ಳಿಯಲ್ಲಿ ದಶಕಗಳಿಂದ ಈ ನೀಲಗಿರಿ ಶಾಪವಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ನೀಲಗಿರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಅಂತರ್ಜಲಮಟ್ಟ ಕುಸಿಯಲು ಕಾರಣವಾಗುತ್ತಿತ್ತು. ಇದರಿಂದ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಇದೀಗ ಅದಕ್ಕೆ ಮುಕ್ತಿ ತೋರಲು ಸರ್ಕಾರದ ಜೊತೆಯಲ್ಲಿ ಜನರು ಸೇರಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ಕೂಡ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಆದೇಶ ಕೂಡ ನೀಡಿತ್ತು. ಇದಕ್ಕೆ ಜನಸಾಮಾನ್ಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನೀಲಗಿರಿ ಮರಗಳ ಬೆಲೆಗಳು ಪಾತಾಳಕ್ಕೆ ಕುಸಿದಿದೆ. ಇದರಿಂದ ಯಾವುದೇ ಲಾಭವಿಲ್ಲ. ಮರಗಳನ್ನು ಬುಡ ಸಮೇತ ನಾಶ ಮಾಡುವುದರಿಂದ ಅಂತರ್ಜಲದ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಜಿಲ್ಲಾಧಿಕಾರಿ ಕರಿಗೌಡರು ಹೇಳುತ್ತಾರೆ.
ದಶಕಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರನ್ನು ಬೇತಾಳನಂತೆ ಕಾಡುತ್ತಿದ್ದ ನೀಲಗಿರಿ ತೋಪುಗಳ ನಿರ್ಮೂಲನ ಅಭಿಯಾನಕ್ಕೆ ರೈತಾಪಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಅಭಿಯಾನದಿಂದ ನೀಲಗಿರಿ ಸಂಪೂರ್ಣವಾಗಿ ನಿರ್ಮೂಲನೆ ಆಗುವುದರ ಜೊತೆಯಲ್ಲಿ ಎಲ್ಲರ ಆಶಯದಂತೆ ಅಂತರ್ಜಲ ನೀರಿನ ಮಟ್ಟ ಏರಿಕೆಯಾದರೆ ಎಲ್ಲಾ ರೈತರು ಖುಷಿಯಾಗಿರಬಹುದು ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದರು.