ಬೆಂಗಳೂರು : ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲದೆ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದದಿದೆ ಎಂದು ಆರೋಪ ಮಾಡಿದ್ದ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿಕೆಗೆ ಸಂಬಂಧಿಸಿದಂತೆ ಈ ಸ್ಪಷ್ಟನೆಯನ್ನು ನೀಡಲಾಗಿದೆ.
ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಹಾಗೂ ಸಮ್ಮತಿ ಇಲ್ಲದೆಯೇ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಿರುವುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂ. ಮೊತ್ತದ ಸಮಗ್ರ ಪರಿಷ್ಕೃತ ಯೋಜನಾ ವರದಿಯ ಶಿಫಾರಸ್ಸಿನ ಅನ್ವಯ ಸರ್ಕಾರವು 2020 ಡಿಸೆಂಬರ್ 16 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಂತೆಯೇ, 2020 ಡಿಸೆಂಬರ್ 24 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: 'ಎಲ್ಲ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪವಿದೆ, ಯಾವ ಮಂತ್ರಿಯೂ ಸಮಾಧಾನವಾಗಿಲ್ಲ'
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ ಬರಪೀಡಿತ ಮಧ್ಯ ಕರ್ನಾಟಕದ ಬವಣೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 2021 ಮಾರ್ಚ್ 25 ರಂದು ನಡೆದ ಸಭೆಯಲ್ಲಿ ಈ ಕಡತವನ್ನು ಕೇಂದ್ರ ಸರ್ಕಾರದ ಹೂಡಿಕೆ ತೀರುವಳಿ ಮಂಡಳಿ(ಇನ್ವೆಸ್ಟ್ಮೆಂಟ್ ಕ್ಲಿಯರೆನ್ಸ್ ಬೋರ್ಡ್)ಗೆ ನೀಡಲಾಗಿದೆ. ಪ್ರಸ್ತುತ ಉನ್ನತಾಧಿಕಾರ ಸಮಿತಿಯ ಮುಂದೆ ತೀರುವಳಿಗಾಗಿ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ 2020 ಡಿಸೆಂಬರ್ 2 ರಂದು ನಡೆದ ನಿರ್ದೇಶಕ ಮಂಡಳಿಯ 16ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ, 21,473 ಕೋಟಿ ರೂ. ಯೋಜನೆಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿರುವ ಅವರು, ಈ ಯೋಜನೆಯು ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಮ್ಮತಿಯೊಂದಿಗೆ ಅನುಮೋದಿತವಾಗಿದೆ. ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ. ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರ್ಕಾರವು ಅನುದಾನ ಮಂಜೂರು ಮಾಡಿದೆ. ಹೀಗಾಗಿ, ಯೋಜನೆಯ ಜಾರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಪ್ಪತ್ತು ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದು ಇದಕ್ಕೆ ಅನುಮತಿ ಇಲ್ಲ ಎಂಬ ಆರೋಪಕ್ಕೆ ಉತ್ತರಿಸಿರುವ ಲಕ್ಷ್ಮಣ ರಾವ್ ಪೇಶ್ವೆ ಅವರು, 2021 ಮಾರ್ಚ 25 ರಂದು ಜರುಗಿದ ಸಭೆಯಲ್ಲಿ ಕೇಂದ್ರ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು 2023-24ನೇ ಸಾಲಿನ ಒಳಗೆ ಪೂರ್ಣ ಗೊಳಿಸಬೇಕಿರುವುದರಿಂದ ಡ್ರಿಪ್ ಕಾಮಗಾರಿ ಅಂದಾಜು ಪಟ್ಟಿಗಳನ್ನು ಡ್ರಿಪ್ ಸಮಿತಿಯ ಐದು ಸಭೆಗಳಲ್ಲಿ ಸವಿವರವಾಗಿ ಚರ್ಚಿಸಿ ಹಾಗೂ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಖರೀದಿಗಳಲ್ಲಿ ಪಾರದರ್ಶಕತಾ ಅಧಿನಿಯಮದಲ್ಲಿನ ನಿಯಮಾನುಸಾರ 4026.60 ಕೋಟಿ ಮೊತ್ತಕ್ಕೆ ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಇದು ಪ್ರಕ್ರಿಯೆಯ ವಿವಿಧ ಹಂತಗಳಲ್ಲಿದೆ.
ಇದನ್ನೂ ಓದಿ: ಮಾಧ್ಯಮದಲ್ಲಿ ಹೀರೋ ಆಗಲು ಹೆಚ್ ವಿಶ್ವನಾಥ್ ಹುಚ್ಚುಚ್ಚಾಗಿ ಮಾತಾಡ್ತಾರೆ : ರಾಜುಗೌಡ
ಕೋವಿಡ್-19 ರ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಮಾಡಲಾಗಿಲ್ಲ. ಹೀಗಾಗಿ, ಪ್ರಸ್ತುತ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಯೋಜನೆಯ ಜಾರಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಪೇಶ್ವೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.