ಬೆಂಗಳೂರು: ಬೆಳಗಾವಿ ಪೀರನವಾಡಿ ಘಟನೆ ಹಿನ್ನೆಲೆ ಕನ್ನಡಪರ ಸಂಘಟನೆ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಸಿಟಿ ರವಿ ವಿರುದ್ಧ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿರುವ ಅವರು, ಕರ್ನಾಟಕದ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವ ಸ್ಥಾನಮಾನದಲ್ಲಿರುವವರು ಸಮಾಜದ ಪರ, ನಾಡಿನ ಪರ, ಭಾಷೆಯ ಪರ ಹೋರಾಡುವವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದು ಖಂಡನೀಯ ಎಂದರು.
ಅಪ್ರತಿಮ ದೇಶಪ್ರೇಮಿ ಹಾಗೂ ನಾಡು ಕಂಡ ಮಹಾನ್ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರವನ್ನು ಸರ್ಕಾರದ ಮುಂಚೂಣಿಯಲ್ಲಿರುವ ನಾಯಕರು ಕನ್ನಡ ಹೋರಾಟಗಾರರನ್ನು ಬೆಂಗಳೂರಿನ ಡಿಜೆ ಹಳ್ಳಿ ಘಟನೆಗೆ ಹೋಲಿಸಿರುವುದು, ಕನ್ನಡದ ಪರವಾಗಿ ಇದ್ದಾರೆಯೆ ಎಂಬ ಸಂಶಯ ಮೂಡಿಸುತ್ತದೆ ಎಂದರು.
ಕನ್ನಡಪರ ಹೋರಾಟಗಾರರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಇಂಥವರು ಈ ಸಮಾಜಕ್ಕೆ ಅವಶ್ಯಕತೆ ಇದೆಯೇ ಎಂಬ ಸಂಶಯ ನನಗೆ ಮೂಡುತ್ತಿದೆ ಎಂದರು.