ಬೆಂಗಳೂರು: ಪಡೆದ ಸಾಲಕ್ಕೆ ಕಮೀಷನ್ ಕೊಟ್ಟಿಲ್ಲ ಎಂದು ಬೆದರಿಕೆ ಹಾಕಿ ಸಿವಿಲ್ ಗುತ್ತಿಗೆದಾರರನ್ನು ಅಪಹರಿಸಿ ಹಣಕ್ಕಾಗಿ ಲಾಡ್ಜ್ನಲ್ಲಿ ಒತ್ತೆಯಾಳಾಗಿ ಮಾಡಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸೇರಿ ನಾಲ್ವರನ್ನು ಕೆ.ಆರ್. ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿವಿಲ್ ಕಾಂಟ್ರಾಕ್ಟರ್ ಆಗಿರುವ ಮುರುಳಿ ಎಂಬವರನ್ನು ಅವರ ಮನೆಗೆ ಹೋಗಿ ಬೆದರಿಸಿ ಕಿಡ್ನ್ಯಾಪ್ ಮಾಡಿದ ಆರೋಪದಡಿ ಕಲಾಸಿಪಾಳ್ಯ ಹಾಗೂ ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಅನಂದ್, ವಿನೋದ್, ಅಪಹರಣಕ್ಕೆ ಸಹಕರಿಸಿದ ಅಜಯ್ ಹಾಗೂ ಲೋಕೇಶ್ ಎಂಬವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜಯ್ ನಗರದ ನಿವಾಸಿಯಾಗಿರುವ ಮುರಳಿ, ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ಸಿವಿಲ್ ಕಾಂಟ್ರಾಕ್ಟರ್ ಆಗಿ ಗುರುತಿಸಿಕೊಂಡಿದ್ದರು. ಗುತ್ತಿಗೆ ಕಾಮಗಾರಿ ನಿರ್ವಹಿಸುವ ಸಲುವಾಗಿ ಬೈಯಪ್ಪನಹಳ್ಳಿಯ ರಾಜಮಣಿ ಎಂಬವರಿಗೆ 60 ಲಕ್ಷ ರೂ. ಸಾಲ ಕೊಡಿಸುವಂತೆ 2022ರಲ್ಲಿ ಮುರಳಿ ಕೇಳಿಕೊಂಡಿದ್ದರು. ರಾಜಮಣಿ ಅವರು ವಿವಿಧ ಬ್ಯಾಂಕ್ಗಳಿಂದ 60 ಲಕ್ಷ ಸಾಲ ಕೊಡಿಸಿದ್ದರು. ಈ ವಿಷಯ ಅರಿತ ಟಿಸಿ ಪಾಳ್ಯದ ಆನಂದ್, ಮುರಳಿ ಅವರಿಗೆ ಕರೆ ಮಾಡಿ ನಮ್ಮ ಯಜಮಾನರಿಂದ (ರಾಜಮಣಿ) ಲೋನ್ ಪಡೆಯಲು ಶಿಫಾರಸ್ಸು ಪಡೆದುಕೊಂಡಿದ್ದೀಯಾ?. ಪ್ರತಿಯಾಗಿ 20 ಲಕ್ಷ ಕಮೀಷನ್ ಕೊಡಬೇಕೆಂದು ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: ಅಡಿಕೆ ವ್ಯಾಪಾರಿಯನ್ನು ಯಾಮಾರಿಸಿ ₹1 ಕೋಟಿ ದೋಚಿದ್ದ ಕಾರು ಚಾಲಕ ಸೇರಿ ನಾಲ್ವರ ಬಂಧನ
ಇದೇ ವಿಚಾರಕ್ಕಾಗಿ ಮುರಳಿ ಹಾಗೂ ಆರೋಪಿಗಳ ಮಧ್ಯೆ ಆಗಾಗ್ಗೆ ಗುದ್ದಾಟ ನಡೆಯುತ್ತಿತ್ತು. ಕಳೆದ ಅಕ್ಟೋಬರ್ 18ರಂದು ಸಂಜಯನಗರದ ಮನೆಗೆ ಹೋಗಿ ಮಾತನಾಡಬೇಕೆಂದು ಮುರಳಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಿ ಕೆ.ಆರ್. ಪುರ ಬಳಿಯ ಖಾಸಗಿ ಲಾಡ್ಜ್ನಲ್ಲಿ ಕೂಡಿ ಹಾಕಿದ್ದರು. ಸುಮಾರು 10 ದಿನಗಳ ಅವಧಿಯಲ್ಲಿ ಮುರುಳಿ ಅವರಿಗೆ ಬೆದರಿಸಿ ಹಲ್ಲೆ ಮಾಡಿ ಸುಮಾರು 7 ಲಕ್ಷದವರೆಗೂ ಹಣವನ್ನು ಮನೆಯ ಕುಟುಂಬಸ್ಥರಿಂದ ಪಡೆದಿದ್ದಾರೆ. ಆಪಹರಿಸಿ ಹಣ ವಸೂಲಿ ಮಾಡಿದ ಸಂಬಂಧ ದೂರು ಬಂದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಆನಂದ್ ವಿರುದ್ದ 12 ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆ: ಇತ್ತೀಚೆಗೆ, ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆ ಕಳ್ಳತನ ಪ್ರಕರಣಗಳ ಆರೋಪಿ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಬಂಧಿಸಿದ್ದರು. ವಿಲಾಸಿ ಜೀವನ ಕ್ಯಾಸಿನೋ ಚಟಕ್ಕಾಗಿ ಮನೆಗಳ್ಳತನದಲ್ಲಿ ಭಾಗಿಯಾಗುತ್ತಿದ್ದ ಆರೋಪಿ, ಕಳವು ಮಾಡಿದ ವಸ್ತುಗಳನ್ನು ಅಡವಿಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಈತ ಬೆಂಗಳೂರು ಪೊಲೀಸರಿಂದಲೇ ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಬಂಧನವಾಗಿದ್ದ.
ಇದನ್ನೂ ಓದಿ: ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚನೆ.. ಹೈದರಾಬಾದ್ ಮೂಲದ ಆರೋಪಿ ಬಂಧನ