ಬೆಂಗಳೂರು: ಪಶ್ಚಿಮ ವಿಭಾಗದ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಖದೀಮ ಗ್ಯಾಂಗ್ವೊಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ 8ರಂದು ವ್ಯಕ್ತಿಯೊಬ್ಬ ಕುಂಬಳಗೋಡುನಿಂದ ಬಿಲ್ಲೂರಿಗೆ ಟಾರ್ಪಲ್ಗಳನ್ನು ತುಂಬಿಕೊಂಡು ರಾತ್ರಿ 12: 45 ರ ಸುಮಾರಿಗೆ ಮಾರ್ಕೆಟ್ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ಚಲಾವಣೆಮಾಡಿಕೊಂಡು ಬರುತ್ತಿದ್ದರು. ಆ ವೇಳೆ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ವಾಹನವನ್ನು ಅಡ್ಡಗಟ್ಟಿದ್ದಾರೆ. ತದ ನಂತರ ಬೆದರಿಸಿ ನಗದು, ಮೊಬೈಲ್ ಎಗರಿಸಿದ್ದಾರೆ. ಈ ಕುರಿತು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ರಚನೆಯಾದ ತಂಡ ಮಹಮ್ಮದ್ ಸಲ್ಲಾಹ್, ಸೈಫುಲ್ಲಾ, ಸೈಫ್, ಶಾಬಿದ್ ಶರೀಫ್ ಎಂಬ ಖದೀಮನನ್ನು ಬಂಧಿಸಿದೆ.
ಇನ್ನು ಬಂಧಿತ ಆರೋಪಿಗಳಿಂದ 1,80,000 ರೂ. ನಗದು, 260 ಗ್ರಾಂ ತೂಕದ 10 ಬೆಳ್ಳಿಯ ಚೈನ್, ಒಂದು ಬೆಳ್ಳಿಯ ಬ್ರಾಸ್ಲೆಟ್, 20 ಗ್ರಾಂ ತೂಕದ 5 ಬೆಳ್ಳಿ ಉಂಗುರ ಸೇರಿದಂತೆ ಯಮಹಾ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಹಾಗೆ ಈ ಆರೋಪಿಗಳು ಕೆ.ಆರ್ ಪುರಂ, ಆರ್.ಟಿ ನಗರ, ಬಾಣಸವಾಡಿಯ ಕೆಲ ಕಡೆಗಳಲ್ಲಿ ಸುಲಿಗೆ ಮಾಡಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.