ಬೆಂಗಳೂರು: ಕಾಯ್ದೆಗಳಿಗೆ ರೈತ ವಿರೋಧಿ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ಸಂಘಟನೆಗಳು ಕಳೆದ ಮೂರು ದಿನಗಳಿಂದ ಫೀಡ್ರಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದೆ. ಇನ್ನೊಂದೆಡೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸೇರಿದಂತೆ ಅಸಂಘಟಿತ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.
ಲಾಕ್ಡೌನ್ ವೇಳೆ ಅಸಂಘಟಿತ ಕಾರ್ಮಿಕರು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ಲಾಕ್ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಳ್ಳದ ಕಾರಣ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಶೇ. 80ರಷ್ಟು ಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ನೀಡಿರುವ ವೇತನವನ್ನು ಮುಂಗಡವಾಗಿ ನೀಡಿಲ್ಲ. ನೀಡಿರುವ ವೇತನಕ್ಕೆ ಮುಂಗಡವಾಗಿ ಕೆಲಸ ಮಾಡಬೇಕೆಂದು ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ರಾಜ್ಯದಲ್ಲಿ ರೈತರ, ದಲಿತರ ಹಾಗೂ ಕಾರ್ಮಿಕರ ವಿರುದ್ಧ ಜಾರಿಗೆ ತಂದಿರುವ ವಿರೋಧಿ ನೀತಿ ಹಾಗೂ ಕೇಂದ್ರ ಸರ್ಕಾರದ ಕಾರ್ಪೋರೇಟ್ ಪರ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ನವ ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ. ಎಲ್ಲಾ ವಲಯಗಳಲ್ಲಿ ದೇಶಿ ಹಾಗೂ ವಿದೇಶಿ ಖಾಸಗಿ ಬಂಡವಾಳದಾರರ ಲೂಟಿಗೆ ವೇಗವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಕೃಷಿ, ಕಾರ್ಮಿಕ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಕಾರ್ಪೋರೇಟ್ಗಳ ಲಾಭಕ್ಕೆ ಬದಲಾಯಿಸಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ನಾಳೆ ಸಹ ಕೇಂದ್ರದ ನೀತಿ ವಿರುದ್ಧ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ವಾಹನ ಸಂಚಾರ ತಡೆಯುವ ಮೂಲಕ ಹೋರಾಟ ನಡೆಸುತ್ತೇವೆ ಎಂದರು.
ಸಿಐಟಿಯು ಹಕ್ಕೊತ್ತಾಯಗಳು: ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸ ಮಿತಿಯ ಹೆಚ್ಚಳ, ಕಾಯ್ದೆಯ ಪರಿಭಾಷೆ ತಿದ್ದುಪಡಿ, ಕೈಗಾರಿಕಾ ವಿವಾದಗಳ ಕಾಯ್ದೆಯ ಸುಗ್ರೀವಾಜ್ಞೆ ಕೈಬಿಡಬೇಕು. ಲಾಕ್ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಕೋವಿಡ್ ಬಂದಾಗ, ಹೋಮ್ ಕ್ವಾರಂಟೈನ್ ಆದಾಗ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಆರ್ಥಿಕ ಹಿಂಜರಿತದ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು. ಹಮಾಲಿ, ಆಟೋ, ಮನೆಗೆಲಸ, ಬೀದಿಬದಿ ವ್ಯಾಪಾರಿಗಳು, ಟೈಲರ್ಗಳು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯಲ್ಲಾದ ಸಂಕಷ್ಟ ಪರಿಹಾರ ಪ್ಯಾಕೇಜ್ ಘೋಷಿಸಬೇಕು.