ಬೆಂಗಳೂರು: ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿಗೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು 'ದಾರಿ' ಸಮಸ್ಯೆ ಇದ್ದು, ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 'ದಾರಿ' ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುತ್ತವೆ ಎಂದು ಇಲಾಖೆ ತಿಳಿಸಿದೆ.
ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದರೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಅಂತಹ - ಜಾಗಗಳನ್ನು ಮುಚ್ಚಿರುವುದು ಹಾಗೂ ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು ರೈತರ ಮಧ್ಯದ ವೈಯಕ್ತಿಕ ದ್ವೇಷ, ಅಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಬಳಕೆದಾರ ರೈತರ ತೊಂದರೆಗಳಿಗೆ ಬಹುತೇಕ ಕಾರಣಗಳಾಗಿರುವುದು ಕಂಡುಬಂದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ 'ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ, ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್‌ನಲ್ಲಿ ನಮೂದು ಮಾಡಲು ಅವಕಾಶವಿದೆ. The Indian Easement Act, 1882 ರಂತ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (Easement) ಹಕ್ಕನ್ನು ಹೊಂದಿದ್ದು, ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದಾಗಿ ತಿಳಿಸಲಾಗಿದ್ದು, ಈ ಬಗ್ಗೆ ಕ್ರಮ ವಹಿಸಲು ಅವಕಾಶ ಇದೆ ಎಂದು ತಿಳಿಸಿದೆ.
ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗದ ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ರೀತಿ ತಹಶೀಲ್ದಾರ್ ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮವಹಿಸುವ ಅಧಿಕಾರ ಹೊಂದಿರುತ್ತಾರೆ. ಅದರಂತೆ, ತಾಲೂಕಿನ ತಹಶೀಲ್ದಾರ್‌ಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಸಂತೃಪ್ತ ರೈತನೇ ಸಮೃದ್ಧ ರಾಷ್ಟ್ರದ ತಳಹದಿ.. ಇದೆಲ್ಲ ರೈತ ಹಸಿರಾಗಿದ್ದರೆ ಮಾತ್ರ..