ಬೆಂಗಳೂರು: ''ಮುಂದಿನ ತಿಂಗಳು ನೆಡೆಯುವ ಸಿಐಐ ಶೃಂಗಸಭೆಯಲ್ಲಿ ಸುಧಾರಿತ ಉತ್ಪಾದನೆ, ಚಲನಶೀಲತೆ, ಆರೋಗ್ಯ, ಹಣಕಾಸು, ಏರೋಸ್ಪೇಸ್ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಲಯಗಳ ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ'' ಎಂದು ಸಿಐಐ ಮಾಜಿ ಅಧ್ಯಕ್ಷ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಿಐಐ 19ನೇ ಇನ್ನೋವೇಶನ್ ಶೃಂಗಸಭೆ ಇನ್ನೋವರ್ಜ್-2023 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಇನ್ನೋವರ್ಜ್ ಶೃಂಗಸಭೆಯ ಆಗಸ್ಟ್ 17 ರಿಂದ 19 ರವರೆಗೆ ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನ ಹೋಟೆಲ್ ಹಿಲ್ಟನ್‌ನಲ್ಲಿ ನಡೆಯಲಿದೆ. ಆರ್ ಆ್ಯಂಡ್ ಡಿ ಪ್ರಯತ್ನಗಳೊಂದಿಗೆ ನಮ್ಮ ಸ್ವಂತ ತಂತ್ರಜ್ಞಾನದ ಬೆಳವಣಿಗೆಯ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ಪ್ರಗತಿಯ ಮೇಲೆಯೂ ಚರ್ಚೆಯಾಗುತ್ತದೆ. ಪ್ರತಿಭೆ, ತಂತ್ರಜ್ಞಾನ ಮತ್ತು ದೃಢತೆಯ ಕುರಿತ ಸಮ್ಮೇಳನವು ಗಡಿಗಳನ್ನು ಮೀರಿದ ನಾವೀನ್ಯತೆಗೆ ಸಾಕ್ಷಿಯಾಗಲಿದೆ'' ಎಂದರು.
ಸಿಐಐ ಅಧ್ಯಕ್ಷ ಹಾಗೂ ವೋಲ್ವೋ ಗ್ರೂಪ್ ಇಂಡಿಯಾದ ಹಿರಿಯ ಅಧ್ಯಕ್ಷ ಕಮಲ್‌ಬಾಲಿ ಮಾತನಾಡಿ, ''ಭಾರತೀಯ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಂಸ್ಕೃತಿಯನ್ನು ಬೆಳೆಸಲು ಶೃಂಗಸಭೆ ಕಾರ್ಯನಿರ್ವಹಿಸಲಿದೆ. ಭವಿಷ್ಯ ರೂಪಿಸುವಲ್ಲಿ ಅಗತ್ಯ ಚರ್ಚೆಗಳು ನಡೆಯಲಿವೆ'' ಎಂದು ತಿಳಿಸಿದರು.
''ಈ ಶೃಂಗಸಭೆ ಒಂಬತ್ತು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವಾಲಯಗಳು, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಪ್ರಮಾಣದ ಕೈಗಾರಿಕಾ ಇಲಾಖೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರಗಳು ಪ್ರಮುಖ ಪಾಲುದಾರರಾಗಿ ಭಾಗಿಯಾಗಲಿದ್ದಾರೆ'' ಎಂದು ಅವರು ಮಾಹಿತಿ ನೀಡಿದರು.
ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್‌ನ ಅಧ್ಯಕ್ಷ ಮತ್ತು ಕೆನ್ನಮೆಟಲ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವಿಜಯಕೃಷ್ಣನ್ ವೆಂಕಟೇಶ್ ಮಾತನಾಡಿ, ''ವಿವಿಧ ಕೈಗಾರಿಕೆಗಳ ನಿಜವಾದ ಸಾಮರ್ಥ್ಯವನ್ನು ಅನಾವರಣ ಮಾಡಲು ಮತ್ತು ವ್ಯಾಪಾರ ಯಶಸ್ಸಿಗೆ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದು. ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಪ್ರಮುಖ ಅಂಶಗಳಾಗಿವೆ. ಇಂಡಿಯಾ ಇನ್ನೊವೇಶನ್ ಶೃಂಗಸಭೆಯು ಆರೋಗ ರಕ್ಷಣೆ, ಚಲನಶೀಲತೆ, ಸಾರಿಗೆ, ಉತ್ಪಾದನೆ ಮತ್ತು ಇತರ ಹಲವು ಕ್ಷೇತ್ರಗಳ ಪ್ರಗತಿಯತ್ತ ಗಮನಹರಿಸಲಿದೆ'' ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ಕ್ಷೇತ್ರದ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.
ಶೃಂಗಸಭೆಯ ಮಾಹಿತಿ: ಮೂರು ದಿನಗಳವರೆಗೆ ನಡೆಯಲಿರುವ ಶೃಂಗ ಸಭೆ ಜಾಗತಿಕ ಸಂಶೋಧನಾ ವ್ಯಾಪ್ತಿ, ಸುಧಾರಿತ ಉತ್ಪಾದನೆ, ಚಲನಶೀಲತೆ, ಆರೋಗ್ಯ, ಸುಸ್ಥಿರ ಹಣಕಾಸು, ಏರೋಸ್ಪೇಸ್ ಮತ್ತು ಶಿಕ್ಷಣದಂತಹ ಉದ್ಯಮ ಕ್ಷೇತ್ರಗಳ ಭವಿಷ್ಯದಲ್ಲಿನ 9 ಪ್ರಮುಖ ವಿಷಯಗಳ ಪುಮುಖ ಟಿಪ್ಪಣಿಗಳು, ಪ್ರದರ್ಶನಗಳು ಮತ್ತು ಚರ್ಚೆಗಳು ನಡೆಯಲಿವೆ. ಹಲವು ಪ್ರತಿಷ್ಠಿತ ಕಂಪನಿಗಳ ಸಿಇಓಗಳು, ಉದ್ಯಮ ತಜ್ಞರು ಮತ ಶಿಕ್ಷಣ ತಜ್ಞರು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ಜುಲೈ 14ರಿಂದ ಇಂದಿನ ತನಕದ ಚಂದ್ರಯಾನ-3ರ ಪಯಣ: ಸ್ಲಿಂಗ್ ಶಾಟ್ ಚಲನೆಯ ನೆರವು