ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಆವಿಷ್ಕಾರಗಳು ನಡೆಯುತ್ತಿರಬೇಕು. ಆದರೆ, ಅವು ಪರಿಸರ ಸ್ನೇಹಿಯಾಗಿರಬೇಕು. ಬೇಸಾಯ ಸುಸ್ಥಿರವಾಗಿರಬೇಕು ಎಂದಾದರೆ ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಕರೆ ನೀಡಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟವು (ಸಿಐಐ) ಆಶ್ರಯದಲ್ಲಿ ಸಂಘಟಿಸಲಾಗಿರುವ “ಸಿಐಐ ಎಗ್ರೋ & ಫುಡ್ ಟೆಕ್ 2020” ವರ್ಚುವಲ್ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಸಚಿವ ಸದಾನಂದ ಗೌಡ, ದೀರ್ಘಕಾಲದವರೆಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಕೃಷಿ ಅನಿವಾರ್ಯ ಎಂದರು.
ರೈತರಿಗೆ ಬೇಸಾಯ ಮಾಡುವಲ್ಲಿ ಬೇಕಾದ ಬೀಜ, ಗೊಬ್ಬರ ನೀರು ಮುಂತಾದ ಮೂಲ ಸಾಮಗ್ರಿಗಳು ಹಾಗೂ ಬೇಸಾಯ ಸುಲಭಗೊಳಿಸುವ ತಂತ್ರಜ್ಞಾನವನ್ನು ಒದಗಿಸುವಲ್ಲಿ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಸಕ್ರಿಯವಾಗಿ ಕೈಜೋಡಿಸುವುದು ಅವಶ್ಯಕವಾಗಿದೆ. ಕೃಷಿಗೆ ಪೂರಕ ವಾತಾವರಣ ಮೂಡಿಸುವ ಹೊಣೆಗಾರಿಕೆ ಸರ್ಕಾರ ಹಾಗೂ ಖಾಸಗಿ ವಲಯಗಳೆರಡರ ಮೇಲೂ ಇದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಅನಾನುಕೂಲ ವಾತಾವರಣಗಳ ಮಧ್ಯೆಯೂ ಕೃಷಿ ವಲಯ ಉತ್ತಮ ಪ್ರಗತಿ ಸಾಧಿಸುತ್ತಿದೆ. ಈ ಬಾರಿ, ಸಕಾಲದಲ್ಲಿ ಬಂದ ಉತ್ತಮ ಮಳೆಯಿಂದ ಬಿತ್ತನೆ ಪ್ರದೇಶ ಬಹಳಷ್ಟು ಹೆಚ್ಚಾಗಿದೆ. ಹೀಗಾಗಿ ರಸಗೊಬ್ಬರ ಬೇಡಿಕೆಯಲ್ಲೂ ಹೆಚ್ಚಾಗಿದೆ. ಆದರೆ, ನಮ್ಮ ಇಲಾಖೆಯು ಉತ್ಪಾದನೆ, ಸಾಗಣೆಗೆ ಸಂಬಂಧಿಸಿದಂತೆ ಸಕಾಲದಲ್ಲಿ ಕೈಗೊಂಡ ಕ್ರಮಗಳಿಂದಾಗಿ ದೇಶಾದ್ಯಂತ ಅತ್ಯಂತ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ನಡೆಯಿತು ಎಂದು ತಿಳಿಸಿದರು.
ಪ್ರಧಾನಿಯವರ ಆಶಯದಂತೆ ರಸಗೊಬ್ಬರ ವಲಯದಲ್ಲಿ ಸಂಪೂರ್ಣ ಸ್ವಾವಲಂಬನೆ ಗಳಿಸುವಲ್ಲಿ ನಮ್ಮ ರಸಗೊಬ್ಬರ ಇಲಾಖೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ. ಪೊಟಾಷ್ ಗೊಬ್ಬರಕ್ಕೆ ಸಂಬಂಧಿಸಿದಂತೆ ನಾವು ಬಹುತೇಕ ಆಮದನ್ನೇ ಅವಲಂಬಿಸಿದ್ದೇವೆ. ಆದರೆ, ಶೇಕಡಾ 80ರಷ್ಟು ಯೂರಿಯಾ ಸ್ವದೇಶದಲ್ಲಿಯೇ ಉತ್ಪಾದನೆ ಮಾಡುತ್ತಿದ್ದೇವೆ. ಪೊಸ್ಫೆಟಿಕ್ ನಮೂನೆಯ ಗೊಬ್ಬರ ಅರ್ಧದಷ್ಟು ನಮ್ಮಲ್ಲಿಯೇ ಉತ್ಪಾದನೆಯಾಗುತ್ತದೆ. ರಸಗೊಬ್ಬರಕ್ಕೆ ಅಗತ್ಯವಾದ ಕಚ್ಚಾವಸ್ತುಗಳನ್ನು ನೇರ ಆವಕಕ್ಕೆ ಪ್ರಯತ್ನಿಸಲಾಗುತ್ತಿದೆ. ವಿದೇಶಿ ಕಂಪನಿಗಳ ಜೊತೆ ಪಾಲುಗಾರಿಕೆ ಹೊಂದಲು ಭಾರತದ ಖಾಸಗಿ ರಸಗೊಬ್ಬರ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವ ಸದಾನಂದ ಗೌಡ ವಿವರಿಸಿದರು.
ರಸಗೊಬ್ಬರ ಇಲಾಖೆಯು ದೇಶಾದ್ಯಂತ ರಸಗೊಬ್ಬರ ಪೂರೈಕೆ ಸಮರ್ಪಕವಾಗಿ ಹಾಗೂ ಕರಾರುವಕ್ಕಾಗಿ ಕೈಗೊಳ್ಳಲು ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡಿದೆ. ರೈತರಿಗೆ ದೊರೆಯುವ ರಿಯಾಯತಿ ಸೋರಿಕೆ ಯಾಗದಂತೆ ತಡೆಯಲು ನೇರ ನೆರವು ವರ್ಗಾವಣೆ ವ್ಯವಸ್ಥೆ (ಡಿಬಿಟಿ ಸಿಸ್ಟಮ್) ಅಳವಡಿಸಿಕೊಳ್ಳಲಾಗಿದೆ. ಮೇಲಿಂದ ಮೇಲೆ ಈ ತಂತ್ರಾಂಶ/ದತ್ತಾಂಶಗಳನ್ನು ಉನ್ನತೀಕರಣಗೊಳಿಸಲಾಗುತ್ತಿದ್ದು “ಗವರ್ನನ್ಸ್ ಡಿಜಿಟಲ್ ಟ್ರಾನ್ಸಫಾರ್ಮೇಷನ್ ಅವಾರ್ಡ್” ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇಲಾಖೆ ಭಾಜನವಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.