ಬೆಂಗಳೂರು: ರಾಜ್ಯ ಸರ್ಕಾರದಿಂದ ಶಿಫಾರಸು ಆಗಿ ತನಿಖಾ ಹಂತದ ಪ್ರಕರಣಗಳ ಮಾಹಿತಿ ಹಾಗೂ ಕೋರ್ಟ್ನಲ್ಲಿ ಕೇಸ್ ಯಾವ ಹಂತದಲ್ಲಿದೆ ಎಂಬುವುದು ಸೇರಿದಂತೆ ಒಂದೇ ಕಡೆ ಮಾಹಿತಿ ಅರಿಯಲು ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿರುವ ರಾಜ್ಯ ಅಪರಾಧ ತನಿಖಾ ವಿಭಾಗ (ಸಿಐಡಿ) ಹೊಸ ಮೊಬೈಲ್ ಆ್ಯಪ್ ಸಿದ್ದಪಡಿಸಿದೆ.
ಅನುಮಾನಾಸ್ಪದ ಸಾವುಗಳು, ಪೊಲೀಸ್ ಸುಪರ್ದಿಯಲ್ಲಿ ನಡೆಯುವ ಕಸ್ಟೋಡಿಯಲ್ ಡೆತ್ಗಳು, ಆರ್ಥಿಕ ಅಪರಾಧಗಳು, ಪರೀಕ್ಷಾ ಅಕ್ರಮ ಹಗರಣ ಸೇರಿ ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಸಾವಿರಾರು ಪ್ರಕರಣಗಳನ್ನ ಸಿಐಡಿ ತನಿಖೆ ನಡೆಸುತ್ತಿದೆ. ಯಾವ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ. ವಕೀಲರ / ವಿಶೇಷ ಅಭಿಯೋಜಕರ ನೇಮಕ ಆಗಿದೆಯಾ? ಕೋರ್ಟ್ ನಿಂದ ಬರುವ ಸಮನ್ಸ್ಗಳು, ಚಾರ್ಜ್ ಶೀಟ್ ಸಲ್ಲಿಕೆ ಸೇರಿ ನ್ಯಾಯಾಲಯದ ಕೋರ್ಟ್ ಕಲಾಪಗಳ ಬಗ್ಗೆ ನಿರಂತರ ನಿಗಾ ವಹಿಸಲು ಕೋರ್ಟ್ ಕೇಸ್ ಮಾನಿಟರ್ ಸಿಸ್ಟಂ (ಸಿಸಿಎಂಎಸ್) ಸಾಫ್ಟ್ವೇರ್ ರಚಿಸಿ ಸಿಐಡಿ ನಿರ್ವಹಣೆ ಮಾಡುತ್ತಿದೆ.
2009ರಿಂದ ಇದುವರೆಗೂ ಸಾವಿರಾರು ಪ್ರಕರಣ ತನಿಖೆ ನಡೆಸಿರುವ ಸಿಐಡಿ 845 ಕೇಸ್ಗಳ ತನಿಖೆ ಅಪೂರ್ಣವಾಗಿವೆ. ಅಲ್ಲದೇ 973 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ತನಿಖಾಧಿಕಾರಿಗಳು ವರ್ಗಾವಣೆ ಹಿನ್ನೆಲೆಯಲ್ಲಿ ತನಿಖೆ ಮಂದಗತಿಯಲ್ಲಿದೆ. ನೂರಾರು ಕೇಸ್ಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆಇದೆ. ತಡೆಯಾಜ್ಞೆ ತೆರವು ಸೇರಿದಂತೆ ಹಲವು ಅಡೆತಡೆ ದಾಟಿ ಪ್ರಕರಣಗಳನ್ನ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಫಾಲೋ ಅಪ್ ಮಾಡುವ ಉದ್ದೇಶದಿಂದ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗಿದೆ.
ತನಿಖಾಧಿಕಾರಿ ಹಾಗೂ ಮೇಲಧಿಕಾರಿಗಳು ಮಾತ್ರ ಈ ಆ್ಯಪ್ ಬಳಸಬಹುದಾಗಿದ್ದು, ಸಾರ್ವಜನಿಕರು ವೀಕ್ಷಿಸಲು ಲಭ್ಯವಿಲ್ಲ. ಕಾಲರ್ಟನ್ ಭವನದಲ್ಲಿರುವ ಸಿಐಡಿ ಪ್ರಧಾನ ಕಚೇರಿಯಲ್ಲಿ 830 ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದಾರೆ. ಈ ಪೈಕಿ ಪಿಎಸ್ಐ, ಮೇಲ್ಮಟ್ಟ ಅಧಿಕಾರಿಗಳು ಸುಮಾರು 150 ಅಧಿಕಾರಿಗಳು ಮಾತ್ರ ಆ್ಯಪ್ ಬಳಸಬಹುದಾಗಿದೆ. ಮೇಲಧಿಕಾರಿಗಳು ಆ್ಯಪ್ ನಿರ್ವಹಣೆ ಮಾಡಲಿದ್ದಾರೆ.
ಸಿಸಿಎಂಎಸ್ ಆ್ಯಪ್ ಯಾಕೆ ?: ಕಳೆದ ಹತ್ತು ವರ್ಷಗಳಲ್ಲಿ ದಾಖಲಾಗಿರುವ ವಿವಿಧ ಅಪರಾಧ ಪ್ರಕರಣಗಳನ್ನ ಸಿಐಡಿ ತನಿಖೆ ನಡೆಸುತ್ತಿದೆ. ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಪೂರಕ ಮಾಹಿತಿ ಹಾಗೂ ಮಹತ್ವದ ಸಾಕ್ಷಿಗಳು, ಸಾಕ್ಷ್ಯಾಧಾರ ಹೇಳಿಕೆ ದಾಖಲಿಸಿಕೊಂಡಿರುತ್ತಾರೆ. ಆದರೆ, ಕೋರ್ಟ್ನಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಸಾಕ್ಷ್ಯಾಧಾರರ ಅಥವಾ ಪ್ರತ್ಯಕ್ಷದರ್ಶಿಗಳ ಹೇಳಿಕೆ ಅದಲು-ಬದಲಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಪ್ರತಿವಾದಿಗಳು ಕೇಳುವ ಪ್ರಶ್ನೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬದಲಾಗುವ ಸಾಧ್ಯತೆಯಿದೆ.
ಅಲ್ಲದೇ ಆಗಾಗ ಇನ್ಸ್ಪೆಕ್ಟರ್, ಡಿವೈಎಸ್ಪಿ ವರ್ಗಾವಣೆಯಾದಾಗ ನೂತನವಾಗಿ ಆ ಜಾಗಕ್ಕೆ ಬರುವ ಅಧಿಕಾರಿಗಳು ಪ್ರಕರಣದ ಗಂಭೀರತೆ ಅರ್ಥಮಾಡಿಕೊಳ್ಳಲು ಸಮಯ ಹಿಡಿಯಲಿದೆ. ಎಲ್ಲಾ ಮಾಹಿತಿ ಅಡಕವಾಗಿರುವ ಆ್ಯಪ್ ಒಮ್ಮೆ ನೋಡಿದರೆ ಪ್ರಕರಣ ಪೂರ್ಣ ವಿವರಗಳ ಬಗ್ಗೆ ತ್ವರಿತವಾಗಿ ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಲಿದೆ. ಕಾಲ - ಕಾಲಕ್ಕೆ ಕೋರ್ಟ್ ನಿಂದ ಬರುವ ಸಮನ್ಸ್, ವಿಶೇಷ ಅಭಿಯೋಜಕರ ನೇಮಕ ಸೇರಿದಂತೆ ತನಿಖೆಗೆ ಬೇಕಾದ ಎಲ್ಲ ಮಾಹಿತಿಗಳು ಒಂದೇ ಆ್ಯಪ್ನಲ್ಲಿ ನೋಡಬಹುದಾಗಿದೆ. ಪ್ರಕರಣದ ತನಿಖೆ ಮುಕ್ತಾಯಗೊಳಿಸಲು ಇದು ನೆರವಾಗಲಿದೆ ಎಂದು ಈಟಿವಿ ಭಾರತ್ಗೆ ಸಿಐಡಿ ಡಿಜಿಪಿ ಡಾ.ಎಂ.ಎಂ.ಸಲೀಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.