ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ 30ರ ವಯೋಮಾನದ ಯುವ ಜನಾಂಗದಲ್ಲಿ ಸಿಕೆಡಿ ( ಕ್ರೋನಿಕ್ ಕಿಡ್ನಿ ಡಿಸೀಸ್) ಪ್ರಮಾಣ ಶೇ. 5ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಬಿಜಿಎಸ್ನ ನೆಫ್ರೋಲಾಜಿಸ್ಟ್ ಅಂಡ್ ಟ್ರಾನ್ಸ್ಪ್ಲಾಂಟ್ ಫಿಸಿಶಿಯನ್ ಡಾ. ಅನಿಲ್‍ಕುಮಾರ್ ಬಿಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿತ್ಯ ಜೀವನದಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಅನುವಂಶಿಕ ಕಿಡ್ನಿ ರೋಗಗಳು ಸಿಕೆಡಿ ಬರಲು ಪ್ರಮುಖ ಕಾರಣಗಳಾಗಿವೆ.ದೀರ್ಘಕಾಲಿಕ ಮೂತ್ರಪಿಂಡ ರೋಗ ಕೆಲವು ತಿಂಗಳು ಅಥವಾ ವರ್ಷಗಳಲ್ಲಿ ಮೂತ್ರಪಿಂಡದ ಚಟುವಟಿಕೆಯನ್ನು ಸ್ಥಗಿತಗೊಳಿಸುವ ರೋಗವಾಗಿದೆ. ಇದರ ಗಂಭೀರತೆ ವಿಭಿನ್ನವಾಗಿದ್ದು, ಸಿಕೆಡಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ರೋಗಿ ಜೀವನಪರ್ಯಂತ ಇದರ ಬಗ್ಗೆ ನಿಗಾ ಇಡಬೇಕಾದ ಅಗತ್ಯವಿದೆ ಎಂದು ಡಾ. ಅನಿಲ್ ಕುಮಾರ್ ಬಿಟಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ಈ ಬಾರಿಯ ವಿಶ್ವ ಮೂತ್ರಪಿಂಡ ದಿನದಂದು ಮೂತ್ರಪಿಂಡ ರೋಗವನ್ನು ಕಡಿಮೆ ಮಾಡುವುದು ಮತ್ತು ಮೂತ್ರಪಿಂಡ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಒಂದು ಅಂದಾಜಿನ ಪ್ರಕಾರ ಭಾರತದ ಶೇ. 17.2 ರಷ್ಟು ಜನರು ಸಿಕೆಡಿಯಿಂದ ಬಳಲುತ್ತಿದ್ದಾರೆ. ಅನಾರೋಗ್ಯಕರವಾದ ಆಹಾರ ಸೇವನೆ, ಜಡತ್ವದ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ.
ಈ ವಯೋಮಾನದ ಗುಂಪಿನಲ್ಲಿ ಗಂಭೀರವಾದ ಅನಾರೋಗ್ಯ ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಯುವಪೀಳಿಗೆ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದರು.