ಬೆಂಗಳೂರು: ರಾಜ್ಯದ 16 ವಿವಿಧ ಅಕಾಡೆಮಿಗಳಿಗೆ 250ಕ್ಕೂ ಹೆಚ್ಚು ಸದಸ್ಯರು ಮತ್ತು ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಿದ್ದು, ಇದರಲ್ಲಿ ಒಬ್ಬನೇ ಒಬ್ಬ ಕ್ರೈಸ್ತರನ್ನೂ ನೇಮಕ ಮಾಡಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿ, ಕನಿಷ್ಠ ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಾದರೂ ಕ್ರೈಸ್ತರ ನೇಮಕ ಆಗಬೇಕಿತ್ತು. ಕೊಂಕಣಿ ಅಕಾಡೆಮಿಯ ಮೊದಲ ಅಧ್ಯಕ್ಷರು ಕ್ರೈಸ್ತರು. ನಾಲ್ಕು ಧರ್ಮ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ ಇರುವ ಕೊಂಕಣಿ ಭಾಷಿಗರಲ್ಲಿ ಬಹುಪಾಲು ಕ್ರೈಸ್ತರಿದ್ದಾರೆ. ಆದರೂ ಕ್ರೈಸ್ತರನ್ನು ನೇಮಕ ಮಾಡದಿರುವುದು ರಾಜ್ಯ ಸರ್ಕಾರದ ಕ್ರೈಸ್ತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿ ಕಾರಿದರು.
ಕಳೆದ ಬಜೆಟ್ನಲ್ಲಿ ಕ್ರೈಸ್ತ ಅಭಿವೃದ್ದಿ ನಿಗಮ ರಚನೆ ಘೋಷಿಸಿ 200 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ ಇದುವರೆಗೆ ಕ್ರೈಸ್ತ ಅಭಿವೃದ್ದಿ ನಿಗಮ ರಚನೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಇಲ್ಇಲಿಯವರೆಗೂ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿಲ್ಲ ಎಂಬ ಸಬೂಬು ಹೇಳುತ್ತಾರೆ. ಅಲ್ಲದೆ ಇದುವರಗೆ 125 ಕೋಟಿ ರೂ.ಬಿಡುಗಡೆ ಮಾಡಿ ಕ್ರೈಸ್ತ ಅಭಿವೃದ್ದಿ ನಿಗಮಕ್ಕೆ ಕೇವಲ 75 ಕೋಟಿ ರೂ.ನೀಡಲಾಗಿದೆ. ಈ ಹಣ ಬಳಕೆ ಮಾಡಬೇಕಾದರೆ ಕ್ರೈಸ್ತ ಅಭಿವೃದ್ದಿ ಸಮಿತಿ ರಚನೆ ಮಾಡಬೇಕು. ಆದರೆ ಇದುವರೆಗೆ ಸಮಿತಿಯನ್ನೂ ಸರ್ಕಾರ ರಚನೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. 15 ದಿನದೊಳಗಾಗಿ ಈ ಲೋಪ ಸರಿಪಡಿಸದೇ ಹೋದರೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.